February 20, 2026
Friday, February 20, 2026
spot_img

ಚೀನಾದ ಆರ್ಥಿಕತೆಗೆ ಹೊಡೆತ: ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ಗೆ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತವ ನಿರ್ಣಾಯಕ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆಗೆ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಅಮೆರಿಕ ನೇತೃತ್ವದ ಮೈತ್ರಿಕೂಟ ‘ಪ್ಯಾಕ್ಸ್ ಸಿಲಿಕಾ’ಗೆ ಸೇರಿಕೊಂಡಿದೆ.

ಪ್ರಸ್ತುತ, ಅಪರೂಪದ ಖನಿಜಗಳ ಪೂರೈಕೆ, ಸಂಸ್ಕರಣೆ ಮತ್ತು ಗಣಿಗಾರಿಕೆಗಾಗಿ ಜಗತ್ತು ಚೀನಾವನ್ನು ಅವಲಂಬಿಸಿದೆ. ಇದೀಗ ಅಮೆರಿಕ ನೇತೃತ್ವದ Pax Silica, ಕೃತಕ ಬುದ್ಧಿಮತ್ತೆ (AI) ಮತ್ತು ಅಪರೂಪದ ಖನಿಜಗಳಿಗೆ ಸುರಕ್ಷಿತ, ದೃಢವಾದ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಯನ್ನು ನಿರ್ಮಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಇದರಿಂದ ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಮೆರಿಕ ರಾಜ್ಯ ಸಚಿವಾಲಯದ ಆರ್ಥಿಕ ವಿಷಯಗಳ ಅಂಡರ್ ಸೆಕ್ರೆಟರಿ ಜೇಕಬ್ ಹೆಲ್‌ಬರ್ಗ್ ಮತ್ತು ಅಮೆರಿಕಾದ ಭಾರತದ ರಾಯಭಾರಿ ಸರ್ಜಿಯೊ ಗೋರ್ ಅವರು ʻಪ್ಯಾಕ್ಸ್ ಸಿಲಿಕಾʼ ಘೋಷಣೆಗೆ ಸಹಿ ಹಾಕಿದರು. ಈ ಮೂಲಕ ಭಾರತ ಈ ಗುಂಪಿಗೆ ಸೇರುವ ಮೂಲಕ 11ನೇ ಸದಸ್ಯ ರಾಷ್ಟ್ರವಾಯಿತು.

ಪ್ರಮುಖ ಖನಿಜಗಳಾದ ಲಿಥಿಯಂ, ಕೋಬಾಲ್ಟ್, ರೇರ್ ಅರ್ಥ್ ಎಲಿಮೆಂಟ್ಸ್, ಸೆಮಿಕಂಡಕ್ಟರ್ ಉತ್ಪಾದನೆ, AI ತಂತ್ರಜ್ಞಾನ ಮತ್ತು ಶಕ್ತಿ ಸಂಪನ್ಮೂಲಗಳಿಂದ ಹಿಡಿದು ಸಂಪೂರ್ಣ ತಂತ್ರಜ್ಞಾನ ಸರಪಳಿಯನ್ನು ಒಳಗೊಂಡಿದೆ. ಭಾರತಕ್ಕೆ ಇದರಿಂದ ಹಲವು ಲಾಭಗಳಾಗಲಿದೆ. ಸೆಮಿಕಂಡಕ್ಟರ್ ತಯಾರಿ ಮತ್ತು AI ಕ್ಷೇತ್ರದಲ್ಲಿ ಸಹಕಾರ ಹೆಚ್ಚಾಗುತ್ತದೆ. ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೊಸ ಹೂಡಿಕೆಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಸಾಧ್ಯವಾಗುತ್ತದೆ. ಜಾಗತಿಕ AI ಆರ್ಥಿಕತೆಯಲ್ಲಿ ಭಾರತದ ಪಾತ್ರ ಬಲಗೊಳ್ಳುತ್ತದೆ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಹೆಚ್ಚಾಗುತ್ತದೆ. ಭವಿಷ್ಯದ ಆರ್ಥಿಕ ಬೆಳವಣಿಗೆಗೆ AI ಮತ್ತು ಸಿಲಿಕಾನ್ ಆಧಾರಿತ ತಂತ್ರಜ್ಞಾನಗಳು ಕೀಲಿಯಾಗಿರುವುದರಿಂದ ಇದು ಆರ್ಥಿಕ ಸುರಕ್ಷತೆಗೂ ಸಹಾಯಕವಾಗುತ್ತದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಭಾರತದಲ್ಲಿ ಈಗಾಗಲೇ ಹತ್ತು ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಹಲವು ಸ್ಥಾಪನೆಯ ಪ್ರಕ್ರಿಯೆಯಲ್ಲಿವೆ.ಪ್ರಪಂಚವು ಭಾರತವನ್ನ ನಂಬುತ್ತದೆ, ನಮ್ಮ ಬೃಹತ್ ಪ್ರತಿಭಾ ಸಂಪತ್ತು ಮತ್ತು ವಿದೇಶಾಂಗ ನೀತಿಯಿಂದ ಈ ನಂಬಿಕೆ ಉಂಟಾಗಿದೆ. ಪ್ಯಾಕ್ಸ್ ಸಿಲಿಕಾ ಸಹಿ ಸೆಮಿಕಂಡಕ್ಟರ್ ಸರಬರಾಜು ಸರಪಳಿ ಮತ್ತು ಉತ್ಪಾದನೆಗೆ ಮಹತ್ವದ್ದಾಗಿದೆ. ಈ ಒಪ್ಪಂದವು ಅಮೆರಿಕ-ಭಾರತ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮತ್ತು 21 ನೇ ಶತಮಾನದ ತಂತ್ರಜ್ಞಾನ ಆರ್ಥಿಕತೆಯಲ್ಲಿ ಭಾರತವನ್ನ ಪ್ರಮುಖ ಆಟಗಾರನನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದರು.

ಪ್ರಸ್ತುತ ಅಮೆರಿಕ, ಜಪಾನ್, ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಇಸ್ರೇಲ್, ಸಿಂಗಾಪೂರ್‌, ಗ್ರೀಸ್, ಖತಾರ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಸದಸ್ಯ ರಾಷ್ಟ್ರಗಳಾಗಿವೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !