November 12, 2026
Thursday, November 12, 2026
spot_img

ಸೋನಿಯಾ ಗಾಂಧಿ ಜೀವನಗಾಥೆ ಈಗ ಬೆಳ್ಳಿತೆರೆಗೆ: ಬಯೋಪಿಕ್ ನಿರ್ಮಾಣಕ್ಕೆ ಮುಂದಾದ ಟಿಪಿಸಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ಪಯಣವನ್ನು ಬೆಳ್ಳಿತೆರೆಗೆ ತರುವ ಪ್ರಯತ್ನ ಆರಂಭವಾಗಿದೆ. ಅವರ ಆತ್ಮಕಥೆ Belonging: A Journey of Love ಆಧರಿಸಿ ತೆಲುಗಿನಲ್ಲಿ ಚಲನಚಿತ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ವಿಷಯವನ್ನು ಸಂಗಾರೆಡ್ಡಿಯಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಸಿನಿಮಾ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಸಂಗ್ರಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ವೇಳೆ ಸಂಗಾರೆಡ್ಡಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂಟಿ ಅಂಜನೇಯಲು ಚಿತ್ರ ನಿರ್ಮಾಣಕ್ಕಾಗಿ 2 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ನಿರ್ಮಾಣಕ್ಕೆ 50 ಸದಸ್ಯರ ಸಮಿತಿ

ಚಿತ್ರದ ಆರಂಭಿಕ ಸಿದ್ಧತೆಗಳನ್ನು ನೋಡಿಕೊಳ್ಳಲು 50 ಸದಸ್ಯರ ಸಮಿತಿ ರಚಿಸುವುದಾಗಿ ಜಗ್ಗಾ ರೆಡ್ಡಿ ಪ್ರಸ್ತಾಪಿಸಿದ್ದಾರೆ. ಈ ಸಮಿತಿಯ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಯನ್ನು ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ವಹಿಸಲಿದ್ದಾರೆ. ಸೂಕ್ತ ಬಜೆಟ್ ಸಿದ್ಧಪಡಿಸಿ, ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸಿದ್ಧತೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸಿ ಚಿತ್ರೀಕರಣಕ್ಕೆ ಚಾಲನೆ ನೀಡುವ ಉದ್ದೇಶವಿದೆ.

ಇದನ್ನೂ ಓದಿ:

ಸೋನಿಯಾ ಬದುಕಿನ ಏರಿಳಿತಗಳ ಚಿತ್ರಣ

ಸೋನಿಯಾ ಗಾಂಧಿ ಅವರು ಗಾಂಧಿ ಕುಟುಂಬದ ಸೊಸೆಯಾಗಿ ಭಾರತಕ್ಕೆ ಬಂದ ದಿನಗಳಿಂದ ಹಿಡಿದು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಭಾವಿ ನಾಯಕಿಯಾಗಿ ಬೆಳೆದ ಹಾದಿಯವರೆಗಿನ ಘಟನೆಗಳು ಚಿತ್ರದಲ್ಲಿ ಮೂಡಿಬರುವ ನಿರೀಕ್ಷೆಯಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಕುಟುಂಬ ಎದುರಿಸಿದ ಸಂಕಷ್ಟ, ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಬೆಳೆಸಿದ ಜವಾಬ್ದಾರಿ ಹಾಗೂ ರಾಜಕೀಯ ಸವಾಲುಗಳನ್ನೂ ಚಿತ್ರ ಒಳಗೊಂಡಿರಲಿದೆ ಎಂದು ಜಗ್ಗಾ ರೆಡ್ಡಿ ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಮನಮೋಹನ್ ಸಿಂಗ್ ಅವರಿಗೆ ಅವಕಾಶ ನೀಡಿದ ನಿರ್ಧಾರವನ್ನೂ ಅವರು ಸ್ಮರಿಸಿದ್ದಾರೆ. ಜೊತೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ರೂಪಿಸುವಿಕೆಯಲ್ಲಿ ಸೋನಿಯಾ, ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಪಾತ್ರವನ್ನು ಉಲ್ಲೇಖಿಸಿದ್ದಾರೆ.

Must Read

Skip to toolbar