February 20, 2026
Friday, February 20, 2026
spot_img

ನೊಂದ ಜೀವಕ್ಕೆ ಆಸರೆಯಾದ ಪೊಲೀಸ್ ಇಲಾಖೆ: ಅನಾಥ ಕುಟುಂಬಕ್ಕೆ ಉದ್ಯೋಗದ ಬೆಳಕು!

ಹೊಸದಿಗಂತ ಚಿತ್ರದುರ್ಗ:

ಪೊಲೀಸರು ದಂಡ ವಿಧಿಸಿದರೆಂಬ ಆಕ್ರೋಶದಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಆಟೋ ಚಾಲಕ ತಿಪ್ಪೇಸ್ವಾಮಿ ಅವರ ಕುಟುಂಬಕ್ಕೆ ಕೊನೆಗೂ ನ್ಯಾಯ ಮತ್ತು ನೆರವು ಒದಗಿ ಬಂದಿದೆ. ಪತಿಯನ್ನು ಕಳೆದುಕೊಂಡು ಪುಟ್ಟ ಮಗುವಿನೊಂದಿಗೆ ಸಂಕಷ್ಟದಲ್ಲಿದ್ದ ಲಕ್ಷ್ಮಿ ಅವರಿಗೆ ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್ ನೌಕರಿ ನೀಡಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ನಗರದ ಗಾಂಧಿವೃತ್ತದಲ್ಲಿ ಆಟೋ ತಡೆದು ದಂಡ ವಿಧಿಸಿದ್ದಕ್ಕೆ ಮನನೊಂದ ಬುರುಜನಹಟ್ಟಿಯ ತಿಪ್ಪೇಸ್ವಾಮಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಪತಿಯ ನಿಧನದಿಂದ ಪತ್ನಿ ಲಕ್ಷ್ಮಿ ಬೀದಿಗೆ ಬಿದ್ದಿದ್ದರು.

ಲಕ್ಷ್ಮಿ ಅವರ ಕಡು ಬಡತನ ಮತ್ತು ಅಸಹಾಯಕತೆಯನ್ನು ಮನಗಂಡ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಂಸ್ಥೆ, ಕಾರ್ಮಿಕ ಕಾಯ್ದೆಯನ್ವಯ ಅವರಿಗೆ ಉದ್ಯೋಗ ನೀಡಲು ಮುಂದಾಗಿದೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ (SP) ರಂಜಿತ್ ಕುಮಾರ್ ಭಂಡಾರು ಅವರು ಲಕ್ಷ್ಮಿ ಅವರಿಗೆ ಅಧಿಕೃತವಾಗಿ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅವರು, “ಕಷ್ಟದಲ್ಲಿದ್ದ ಕುಟುಂಬಕ್ಕೆ ಕೆಲಸ ನೀಡುವ ಮೂಲಕ ಚಿತ್ರದುರ್ಗ ವೈದ್ಯಕೀಯ ಸಂಸ್ಥೆ ಮಾನವೀಯತೆ ಮೆರೆದಿದೆ,” ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಸಂಸ್ಥೆಯ ಡೀನ್ ಡಾ. ಯುವರಾಜ್, ಡಾ. ವೇಣು, ಕಾಂಗ್ರೆಸ್ ಮುಖಂಡ ಸೋಮಶೇಖರ್, ಕರಿಬಸವಯ್ಯ ಹಾಗೂ ಬುರುಜನಹಟ್ಟಿಯ ಜೆ. ಮಂಜುನಾಥ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !