April 16, 2026
Thursday, April 16, 2026
spot_img

ಶತಮಾನದ ಶಿಕ್ಷಣ ಸಂಸ್ಥೆಗೆ ಯುವ ನಾಯಕತ್ವ: ಕೆ.ಎಲ್.ಇ ಕಾರ್ಯಾಧ್ಯಕ್ಷರಾಗಿ ಅಮಿತ್ ಕೋರೆ ಆಯ್ಕೆ

ಹೊಸದಿಗಂತ ಬೆಳಗಾವಿ:

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ನೂತನ ಚೇರ್ಮನ್ ಆಗಿ ಯುವ ನಾಯಕ ಅಮಿತ್ ಕೋರೆ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ಕೆ.ಎಲ್.ಇ ಪ್ರಧಾನ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಳೆದ 42 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಡಾ. ಪ್ರಭಾಕರ್ ಕೋರೆ ಅವರು ಅಧಿಕಾರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ಡಾ. ಪ್ರಭಾಕರ್ ಕೋರೆ ಅವರು ಕಳೆದ ನಾಲ್ಕು ದಶಕಗಳ ಕಾಲ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದ್ದು, ಕೆ.ಎಲ್.ಇ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿಗೆ ಭಾಜನರಾಗಿದ್ದಾರೆ.

46 ವರ್ಷದ ಅಮಿತ ಕೋರೆ ಅವರು ಯುವ ಶಕ್ತಿಯ ಸಂಕೇತವಾಗಿದ್ದು, ತಂತ್ರಜ್ಞಾನ ಮತ್ತು ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಸಂಸ್ಥೆಯನ್ನು ಇನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದ್ದಾರೆ.

1916 ರಲ್ಲಿ ಸ್ಥಾಪನೆಯಾದ ಕೆ.ಎಲ್.ಇ ಸಂಸ್ಥೆಯು ಇಂದು ಶಾಲೆ, ಕಾಲೇಜು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ಸುಮಾರು 317 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ.

ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಬೆಳೆದಿರುವ ಅಮಿತ್ ಕೋರೆ ಅವರ ನೇತೃತ್ವದಲ್ಲಿ ಸಂಸ್ಥೆಯು ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂಬ ಭರವಸೆ ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !