ಹೊಸದಿಗಂತ ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗದಲ್ಲಿ ಸೌಂದರ್ಯ ಮತ್ತು ಕೃಷಿ ಚಿಂತನೆಗಳ ಸಂಗಮದಂತೆ ‘ಫಲ-ಪುಷ್ಪ ಪ್ರದರ್ಶನ’ಕ್ಕೆ ಚಾಲನೆ ಸಿಕ್ಕಿದೆ. ನಗರದ ವಿ.ಪಿ. ಬಡಾವಣೆಯ ತೋಟಗಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಈ ಮೂರು ದಿನಗಳ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಶುಕ್ರವಾರ ಉದ್ಘಾಟಿಸಿದರು.

ಸಾಮಾನ್ಯ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗಳು ಆರ್ಥಿಕವಾಗಿ ಹೆಚ್ಚು ಲಾಭದಾಯಕ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾದರಿಯಲ್ಲಿ ಚಿತ್ರದುರ್ಗದಲ್ಲೂ ತೋಟಗಾರಿಕೆ ವಿಸ್ತೀರ್ಣ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಭದ್ರಾ ನೀರನ್ನು ಮಾರ್ಚ್ ಅಂತ್ಯದೊಳಗೆ ಜಿಲ್ಲೆಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಪ್ರದರ್ಶನದಲ್ಲಿ ಖ್ಯಾತ ಸಾಹಿತಿ ಡಾ. ಬಿ.ಎಲ್. ವೇಣು ಅವರ ಪ್ರತಿಮೆ ಹಾಗೂ ಅವರ ಕಾದಂಬರಿಗಳನ್ನು ಕಲ್ಲು ಬಂಡೆಗಳ ಮೇಲೆ ಕೆತ್ತಿ ಗೌರವಿಸಲಾಗಿದೆ. “ಬದುಕಿರುವಾಗಲೇ ಇಲಾಖೆ ಇಂತಹ ಗೌರವ ನೀಡಿದ್ದು ನನ್ನ ಪುಣ್ಯ” ಎಂದು ವೇಣು ಅವರು ಭಾವುಕರಾಗಿ ನುಡಿದರು.
ಆಕರ್ಷಣೀಯ ಕಲಾಕೃತಿಗಳು:
ಹೂವಿನಿಂದ ನಿರ್ಮಿಸಿದ ಟಾಂಗಾ ಮತ್ತು ಮತ್ಸ್ಯ ಪ್ರದರ್ಶನ.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಒನಕೆ ಓಬವ್ವ ಹಾಗೂ ವಿವಿಧ ಮಠಗಳ ಕಲಾಕೃತಿಗಳು.
ಬಿ.ಎಲ್. ವೇಣು ಅವರ ಸಾಹಿತ್ಯ ಲೋಕವನ್ನು ಬಿಂಬಿಸುವ ವಿನ್ಯಾಸಗಳು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್. ಮಹೇಶ್ವರಪ್ಪ, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 35 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಈ ಪ್ರದರ್ಶನವನ್ನು ಮುಂದಿನ ದಿನಗಳಲ್ಲಿ ಲಾಲ್‌ಬಾಗ್ ಮಾದರಿಯಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಆಯೋಜಿಸುವ ಸಂಕಲ್ಪವನ್ನು ಸಚಿವರು ವ್ಯಕ್ತಪಡಿಸಿದರು.



