February 20, 2026
Friday, February 20, 2026
spot_img

ಮೃತ್ಯುರೂಪಿಯಾದ ಸಾಕುನಾಯಿ: ನಾಲ್ಕು ವರುಷದ ಕಂದಮ್ಮನ ಮೇಲೆ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬನಶಂಕರಿಯ 6ನೇ ಹಂತದಲ್ಲಿ ಸಾಕುನಾಯಿಯೊಂದು ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ಭೀಕರವಾಗಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಮಾಲೀಕನ ಅತಿಯಾದ ಆತ್ಮವಿಶ್ವಾಸ ಮತ್ತು ಬೇಜವಾಬ್ದಾರಿಯೇ ಈ ಘಟನೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಬನಶಂಕರಿಯ 7ನೇ ಕ್ರಾಸ್ ನಿವಾಸಿ ಮುನಿಯಲ್ಲಪ್ಪ ಎಂಬುವವರು ತಮಗೆ ಸೇರಿದ ‘ರಾಟ್‌ವೀಲರ್’ ತಳಿಯ ನಾಯಿಯನ್ನು ವಾಕಿಂಗ್‌ಗೆ ಕರೆತಂದಿದ್ದರು. ಈ ಸಮಯದಲ್ಲಿ ನಾಯಿಯ ಕೊರಳಲ್ಲಿದ್ದ ಪಟ್ಟಿಯನ್ನು ಬಿಚ್ಚಿದ್ದಾರೆ. ತಕ್ಷಣವೇ ಹತೋಟಿ ತಪ್ಪಿದ ನಾಯಿ, ಅಲ್ಲಿಯೇ ಇದ್ದ ನಾಲ್ಕು ವರ್ಷದ ಬಾಲಕನ ಮೇಲೆ ನೆಗೆದು ಅಟ್ಟಹಾಸ ಮೆರೆದಿದೆ.

ನಾಯಿಯ ದವಡೆಗೆ ಸಿಲುಕಿದ ಬಾಲಕನ ಕಾಲಿನ ಮಾಂಸಖಂಡಗಳು ಸಂಪೂರ್ಣವಾಗಿ ಕಿತ್ತುಬಂದಿದ್ದು, ರಕ್ತದ ಮಡುವಿನಲ್ಲಿ ಬಾಲಕ ಕಿರುಚಾಡಿದ್ದಾನೆ. ತಕ್ಷಣವೇ ಬಾಲಕನನ್ನು ಸಮೀಪದ ಬಿಜಿಎಸ್ (BGS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಜನನಿಬಿಡ ಪ್ರದೇಶದಲ್ಲಿ ಅಪಾಯಕಾರಿ ತಳಿಯ ನಾಯಿಯನ್ನು ಕಟ್ಟಿ ಹಾಕದೆ ನಿರ್ಲಕ್ಷ್ಯ ವಹಿಸಿದ ಮಾಲೀಕನ ವಿರುದ್ಧ ಬಾಲಕನ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !