February 20, 2026
Friday, February 20, 2026
spot_img

ಟ್ರಂಪ್ ಗೆ ಬಿಗ್ ಶಾಕ್: ಸುಂಕ ಹೇರಲು ಯಾವ ಅಧಿಕಾರ ಇಲ್ಲ ಎಂದ ಅಮೆರಿಕ ಸುಪ್ರೀಂ ಕೋರ್ಟ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್ ಎದುರಾಗಿದ್ದು, ತನ್ನ ವಿರುದ್ಧ ತಿರುಗಿಬಿದ್ದವರ ಮೇಲೆ ಸುಂಕದ ಅಸ್ತ್ರ ಪ್ರಯೋಗಿಸುತ್ತಿದ್ದ ಟ್ರಂಪ್‌ ಗೆ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ. ಟ್ರಂಪ್ ಅವರ ವಾಪಾರ ಸುಂಕದ ಆದೇಶಗಳನ್ನು ಶುಕ್ರವಾರ ರದ್ದುಗೊಳಿಸಿದೆ.

ಪ್ರಪಂಚದಾದ್ಯಂತ ದೇಶಗಳ ಮೇಲೆ ವಿಧಿಸಿರುವ ಸುಂಕಗಳು ಕಾನೂನು ಬಾಹಿರವಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರಿಗೆ ಸುಂಕ ವಿಧಿಸಲು ಕಾನೂನುಬದ್ಧ ಅಧಿಕಾರವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರಿದ್ದ ಪೀಠ ಘೋಷಿಸಿದೆ.

ಈ ತೀರ್ಪು ಅಮೆರಿಕದ ವ್ಯಾಪಾರ ಮತ್ತು ಆರ್ಥಿಕ ನೀತಿಯ ಪಥವನ್ನೇ ಬದಲಿಸುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಕನಿಷ್ಠ ಮೂರು ಬಾರಿ ಈ ತೀರ್ಪನ್ನು ಮುಂದೂಡಿದ್ದ ಸುಪ್ರೀಂ ಕೋರ್ಟ್, ಮಾರುಕಟ್ಟೆ ಮತ್ತು ನೀತಿ ನಿರೂಪಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಟ್ರಂಪ್ ವಿಧಿಸಿದ್ದ ಸುಂಕಗಳ ವ್ಯಾಪ್ತಿ ಮತ್ತು ಪ್ರಮಾಣವು ಅಮೆರಿಕದ ಒಟ್ಟಾರೆ ಆರ್ಥಿಕತೆಯ ಮೇಲೆ ಬೀರುತ್ತಿದ್ದ ಪರಿಣಾಮವನ್ನು ಗಮನಿಸಿದರೆ, ಈ ತೀರ್ಪು ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಲಾಗಿದೆ.

ಟ್ರಂಪ್ ವಿರುದ್ಧ 2025ರಲ್ಲಿ ದಾಖಲಾಗಿದ್ದ ‘ಲರ್ನಿಂಗ್ ರಿಸೋರ್ಸಸ್ ವರ್ಸಸ್‌ ಟ್ರಂಪ್’ ಮತ್ತು ‘ಟ್ರಂಪ್ ವಿರುದ್ಧ ವಿ.ಓ.ಎಸ್. ಸೆಲೆಕ್ಷನ್ಸ್ ಇಂಕ್’ ಎಂಬ ಎರಡು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.

ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA), ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಟ್ರಂಪ್ ಆಡಳಿತಕ್ಕೆ ಕೇವಲ ಕಾರ್ಯನಿರ್ವಾಹಕ ಆದೇಶಗಳ ಮೂಲಕ ಇಷ್ಟೊಂದು ವ್ಯಾಪಕವಾದ ಸುಂಕಗಳನ್ನು ಹೇರಲು ಅಧಿಕಾರ ನೀಡುತ್ತದೆಯೇ? ಎಂಬ ಬಗ್ಗೆ ಸ್ಪಷ್ಟನೆ ಕೋರಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಕೋರ್ಟ್, ಅಧ್ಯಕ್ಷರಿಗೆ ಸುಂಕ ವಿಧಿಸಲು ಕಾನೂನು ಅಧಿಕಾರ ಇಲ್ಲ. ಆದ್ರೆ ಟ್ರಂಪ್‌ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA)ಯನ್ನ ಬಳಸಿಕೊಂಡು ಬೃಹತ್‌ ಆಮದು ಸುಂಕ ವಿಧಿಸುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಈ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

1977 ರ ಈ ಕಾನೂನು ಅಧ್ಯಕ್ಷರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ ವಾಣಿಜ್ಯ ಪರಿಸ್ಥಿತಿ ನಿಯಂತ್ರಿಸಲು ಅವಕಾಶ ನೀಡುತ್ತದೆ. ಆದ್ರೆ ಸುಂಕವನ್ನು ಇಂತಿಷ್ಟೇ ಪ್ರಮಾಣದಲ್ಲಿ ವಿಧಿಸಬೇಕು ಎಂದು ಹೇಳುವುದಿಲ್ಲ. ಒಂದು ವೇಳೆ ಅಧ್ಯಕ್ಷರು ಸುಂಕ ವಿಧಿಸಲು ವಿಶೇಷ ಅಧಿಕಾರ ಬಳಸಿದ್ದರೆ, ಅದನ್ನ ಸಮರ್ಥಿಸಿಕೊಳ್ಳಲು ಅನುಮೋದನೆ ಪಡೆದಿರುವುದನ್ನ ಸಾಬೀತುಪಡಿಸಬೇಕಾಗುತ್ತದೆ ಎಂಬ ಅಂಶವನ್ನು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !