October 17, 2026
Saturday, October 17, 2026
spot_img

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಅಬ್ಬರ: ಭಾರತ-ವೆಸ್ಟ್ ಇಂಡೀಸ್ ಕೊನೆಯ ಟಿ20 ಪಂದ್ಯ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ ಐದು ಪಂದ್ಯಗಳ ಈ ಸರಣಿಯು 2-2 ರಿಂದ ಸಮಬಲದಲ್ಲಿ ಕೊನೆಗೊಂಡಿದ್ದು, ಟ್ರೋಫಿಯನ್ನು ಎರಡೂ ತಂಡಗಳು ಜಂಟಿಯಾಗಿ ಹಂಚಿಕೊಂಡಿವೆ.

ಮಳೆಯ ಅಡ್ಡಿಯ ಕಾರಣ ಪಂದ್ಯವನ್ನು ತಲಾ 9 ಓವರ್‌ಗಳಿಗೆ ಸೀಮಿತಗೊಳಿಸಿ ಆರಂಭಿಸಲಾಯಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 7.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು. ತದನಂತರ ಪಂದ್ಯ ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು.

ಇಶಾನ್ ಕಿಶನ್, ನಮನ್ ಧೀರ್ ಬ್ಯಾಟಿಂಗ್ ಅಬ್ಬರ

ಭಾರತದ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ (6) ಕೇವಲ ಒಂದು ಸಿಕ್ಸರ್ ಬಾರಿಸಿ ಬೇಗನೆ ಔಟಾದರು. ಆದರೆ ಮತ್ತೊಂದು ತುದಿಯಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ಬೌಲರ್‌ಗಳ ವಿರುದ್ಧ ಅಬ್ಬರಿಸಿದರು. ರೊಮಾರಿಯೋ ಶೆಫರ್ಡ್ ಎಸೆದ ಎರಡನೇ ಓವರ್‌ನಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಒಳಗೊಂಡಂತೆ 24 ರನ್ ಚಚ್ಚಿದ ಇಶಾನ್ ಕಿಶನ್, ಕೇವಲ 10 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 30 ರನ್ ಸಿಡಿಸಿ ಔಟ್‌ ಆದರು.

ಬಳಿಕ ಬಂದ ಸಂಜು ಸ್ಯಾಮ್ಸನ್ 7 ಎಸೆತಗಳಲ್ಲಿ 16 ರನ್ ಬಾರಿಸಿ ಶಮರ್ ಸ್ಪ್ರಿಂಗರ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಶ್ರೇಯಸ್ ಅಯ್ಯರ್ 14 ಎಸೆತಗಳಲ್ಲಿ 22 ರನ್ ಗಳಿಸಿ ಕೀಮೋ ಪಾಲ್ ಎಸೆತದಲ್ಲಿ ಔಟಾದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಯುವ ಬ್ಯಾಟರ್ ನಮನ್ ಧೀರ್ ಕೇವಲ 6 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 24 ರನ್ ಚಚ್ಚಿ ಅಜೇಯರಾಗಿ ಉಳಿದರು. ತಿಲಕ್ ವರ್ಮಾ (7) ಔಟಾದ ತಕ್ಷಣವೇ ಮಳೆ ಸುರಿಯಲಾರಂಭಿಸಿತು.

ವೆಸ್ಟ್ ಇಂಡೀಸ್ ಪರ ಬೌಲಿಂಗ್‌ನಲ್ಲಿ ಶಮರ್ ಸ್ಪ್ರಿಂಗರ್ ಮತ್ತು ಕೀಮೋ ಪಾಲ್ ತಲಾ 2 ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡರು. ಕುತೂಹಲ ಘಟ್ಟ ತಲುಪಿದ್ದ ಟಿ20 ಸರಣಿಯು ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಜಂಟಿ ವಿಜೇತರ ಘೋಷಣೆಯೊಂದಿಗೆ ಅಂತ್ಯಗೊಂಡಿದೆ.

Must Read

Skip to toolbar