February 21, 2026
Saturday, February 21, 2026
spot_img

ಕಲಬುರಗಿಯಲ್ಲಿ ಶಿವಾಜಿ ಜಯಂತಿ ವೇಳೆ ಗಲಾಟೆ: ಎರಡು ಸಮುದಾಯಗಳ ನಡುವೆ ಕಲ್ಲೇಟು

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಗೋಕುಲ ನಗರದಲ್ಲಿನ ಗಣೇಶ್ ಕಟ್ಟೆ ಬಳಿ ಶಿವಾಜಿಯವರ ಅವರ ಭಾವಚಿತ್ರವನ್ನು ಇಟ್ಟು ಶಿವಾಜಿ ಜಯಂತಿ ಅಂಗವಾಗಿ ಯುವಕರು ಸೌಂಡ್ ಬಾಕ್ಸ್ ಹಚ್ಚಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಸೌಂಡ್ ಕಡಿಮೆ ಮಾಡುವಂತೆ ಮತ್ತೊಂದು ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಗ್ವಾದ ಶುರುವಾಗಿದೆ.

ವಾಗ್ವಾದ ತೀವ್ರಗೊಂಡು ಎರಡೂ ಸಮುದಾಯದವರ ನಡುವೆ ಹೊಡೆದಾಟಕ್ಕೆ ತಿರುಗಿದ್ದು, ಕಟ್ಟಿಗೆ ಹಾಗೂ ಕಲ್ಲುಗಳಿಂದ ಪರಸ್ಪರ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈ ಘಟನೆ ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಬಳಿಕ ಇಬ್ಬರು ಸಮುದಾಯಗಳ ಮುಖಂಡರ ನಡುವೆ ಸಂಧಾನ ನಡೆಸಲಾಗಿದ್ದು,ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !