ಹರೀಶ್ ಕೆ.ಆದೂರು
ಹೊಸದಿಗಂತ ಮೂಡುಬಿದಿರೆ:
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶಾತಿಗೆ ಪ್ರವೇಶ ಪರೀಕ್ಷೆ ಭಾನುವಾರ ನಡೆಯಲಿದೆ. ಇದಕ್ಕಾಗಿ ಇಡೀ ಕರ್ನಾಟಕದಿಂದ ಶನಿವಾರವೇ ಮೂಡುಬಿದಿರೆಯತ್ತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ. ಇವರೆಲ್ಲರಿಗೂ ಸುಸಜ್ಜಿತ ವ್ಯವಸ್ಥೆಯನ್ನು ಆಳ್ವಾಸ್ ಸಂಸ್ಥೆ ಆಯೋಜಿಸಿದೆ. ಬಸ್ಸು,ಕಾರು,ಟೆಂಪೋ ಮೂಲಕ ದಂಡು ದಂಡಾಗಿ ವಿದ್ಯಾರ್ಥಿಗಳು, ಪೋಷಕರು ಆಳ್ವಾಸ್ ಸಂಸ್ಥೆಯತ್ತ ಆಗಮಿಸತೊಡಗಿದ್ದಾರೆ.

ಭಾನುವಾರ ಬೆಳಗ್ಗೆ ಪರೀಕ್ಷೆ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಂತ ಶಿಸ್ತಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತ್ಯೇಕ ನೋಂದಾವಣೆ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆಳ್ವಾಸ್ ಸಂಸ್ಥೆಯ ಸಿಬ್ಬಂದಿಗಳು, ಶಿಕ್ಷಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರವೇಶಾತಿಗೆ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಸಂಸ್ಥೆ ಒದಗಿಸಿಕೊಟ್ಟಿತ್ತು. ಅಕ್ಟೋಬರ್ ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿತ್ತು. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷವೇ ಸರಿ. ಕಳೆದ ೧೮ವರುಷಗಳಿಂದ ಇದೇ ಮಾದರಿಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ.

ಕನ್ನಡ ಮಾಧ್ಯಮ ಶಾಲೆಗಾಗಿ ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು ಪ್ರಾಥಮಿಕ ಹಂತ, ಮುಖ್ಯ ಹಂತ ಮತ್ತು ಸಂದರ್ಶನ ಹಂತ ಎಂದು ಗುರುತಿಸಲಾಗುತ್ತದೆ. ? ಪ್ರಾಥಮಿಕ ಹಂತದಲ್ಲಿ ಒಎಂಆರ್ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಇದ್ದು ಉಳಿದ ಸ್ಪರ್ಧಾತ್ಮಕ ಪರೀಕ್ಷೆಯಂತೆ ವ್ಯವಸ್ಥೇ ಮಾಡಲಾಗಿದೆ. ಇಲ್ಲಿ ವಿದ್ಯಾರ್ಥಿಯ ಚಿಂತನಾ ಸಾಮರ್ಥ್ಯವನ್ನು ಗುರುತಿಸಲಾಗುತ್ತದೆ. ಇದರಲ್ಲಿ ಸಂಸ್ಥೆ ನಿಗದಿಪಡಿಸಿದ ಮಾನದಂಡ ಗಳಿಸಿದವರು ಮಾತ್ರವೇ ಮುಖ್ಯ ಹಂತಕ್ಕೆ ಆಯ್ಕೆಯಾಗುತ್ತಾರೆ.

ಮುಖ್ಯ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತು ಕೌಶಲ್ಯಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷರು ಡಾ.ಎಂ. ಮೋಹನ ಆಳ್ವರವರೇ ಸಂದರ್ಶನವನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ,ಭಾಷಾ ಸಾಮರ್ಥ್ಯ ಮತ್ತು ಆಳ್ವಾಸ್‌ನ ಕಲಿಕಾ ವ್ಯವಸ್ಥೆಗಳಿಗೆ ಪೂರಕವಾಗಿರುವವರನ್ನು, ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಕರ ಮಕ್ಕಳಿಗೆ, ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳಿಗೆ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ದಾಖಲಾತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.



