ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇಂದು ಭಾರೀ ಮಳೆಯಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡುಗು ಮಿಂಚಿನ ಭಾರೀ ಮಳೆ ಸುರಿದಿದೆ.
ಸಂಜೆ ಸುಮಾರು 6.10ಕ್ಕೆ ಆರಂಭವಾದ ಮಳೆಯು 7 ಗಂಟೆ ತನಕ ಎಡೆಬಿಡದೆ ಸುರಿಯಿತು.
ಈ ಪರಿಸರದಲ್ಲಿ ಸುರಿದ ಪ್ರಥಮ ಮಳೆಯು ಧಗೆಯಿಂದ ಕೂಡಿದ್ದ ಇಳೆಗೆ ತಂಪೆರೆಯಿತು. ಭಾರೀ ಮಳೆಯು ಕೃಷಿಕರ ಮುಖದಲ್ಲಿ ಮಂದಹಾಸ ಬೀರಿತು. ಆದರೆ ಅಚಾನಕ್ ಆಗಿ ಸುರಿದ ಮಳೆಯಿಂದ ಕೆಲವು ಕಡೆ ಅಂಗಳದಲ್ಲಿ ಹಾಕಿದ್ದ ಅಡಿಕೆಯು ಮಳೆಗೆ ಒದ್ದೆಯಾಗಿ ಸಂಕಷ್ಟ ತಂದಿತ್ತು.

ಭಾರೀ ಮಳೆಯ ಕಾರಣದಿಂದ ರಸ್ತೆಯಲ್ಲಿ ನೀರು ಹರಿದು ವಾಹನಗಳ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೆ ಅಲ್ಪ ಪ್ರಮಾಣದ ತೊಂದರೆ ನೀಡಿತು. ಸುಬ್ರಹ್ಮಣ್ಯ, ಐನೆಕಿದು, ಯೇನೆಕಲ್ಲು, ಕೈಕಂಬ, ಕಿದು, ಬಿಳಿನೆಲೆ, ನೆಟ್ಟಣ, ಮರ್ಧಾಳ, ಕಡಬ, ಮೊದಲಾದ ಕಡೆ ಮಳೆ ಸುರಿದಿದೆ.
ಬೆಳ್ತಂಗಡಿ ತಾಲೂಕಿನಲ್ಲೂ ಭಾರೀ ಗಾಳಿ ಮಳೆಯಾಗಿದ್ದು, ನಾರಾವಿ, ಕಾಶಿಪಟ್ಟ, ಕಡಿರುದ್ಯಾವರ, ನಡ, ಕಕ್ಕಿಂಜೆ, ನೆರಿಯ, ನಿಡ್ಲೆ, ಅರಸಿನಮಕ್ಕಿ, ಚಾರ್ಮಾಡಿಯಲ್ಲಿ ಗುಡುಗು ಸಹಿತ ಮಳೆ ಆಗಿದೆ,ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಾವು ಮತ್ತು ಕಾಜೂರು ಧರ್ಮಸ್ಥಳ, ಬಳಂಜ, ಅಳದಂಗಡಿ ಪರಿಸರದಲ್ಲಿ ತುಂತುರು ಸಾಧಾರಣ ಮಳೆಯಾಗಿದೆ. ಗುರುವಾಯನಕೆರೆ, ಮಡಂತ್ಯಾರು, ಬೆಳ್ತಂಗಡಿ ಸಹಿತ ನಾನಾ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ವೇಣೂರಿನಲ್ಲಿ ಉತ್ತಮ ಮಳೆಯಾಗಿದೆ.
ಹಲವೆಡೆ ಮನೆ ಅಂಗಳದಲ್ಲಿ ಒಣಗಲು ಹಾಕಿದ ಅಡಕೆ ಮಳೆಯಿಂದ ನೆನೆಯುವಂತಾಗಿದೆ. ದೃಶ್ಯಗಳು ಕಂಡು ಬಂದವು. ಕಕ್ಕಿಂಜೆ ಬಸ್ತಿ ಸಮಿಪ ಗಾಳಿ ಮಳೆಗೆ ಭಾರಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಸ್ಥಳೀಯರು ಮರವನ್ನು ತೆರವುಗೊಳಿಸಿದ್ದಾರೆ.
ಕಾರ್ಕಳದ ಹಲವೆಡೆ ಅಕಾಲಿಕ ಮಳೆ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ, ಮಾಳ, ನಲ್ಲೂರು ಮತ್ತು ಸಾಣೂರು ಗ್ರಾಮಗಳಲ್ಲಿ ಈ ವರ್ಷದ ಮೊದಲ ಅಕಾಲಿಕ ಮಳೆ ಸುರಿದಿದೆ. ದಿಢೀರ್ ಮಳೆಯಾಗಿದ್ದರಿಂದ ವಾತಾವರಣ ಬಿಸಿಯಾಗಿದೆ.



