April 10, 2026
Friday, April 10, 2026
spot_img

ಪೊಲೀಸ್ ವ್ಯಾನ್‌ಗೆ ಟ್ರಕ್ ಡಿಕ್ಕಿ: ಐವರು ಎಪಿಆರ್ ಸಿಬ್ಬಂದಿಗಳ ದುರ್ಮರಣ, ಮೂವರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಝಾರ್ಸುಗುಡಾ ಸಮೀಪ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ಪೊಲೀಸ್ ವ್ಯಾನ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಮುಖ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಿನ ಜಾವ ನಿಯಮಿತ ಪೆಟ್ರೋಲ್ ಕರ್ತವ್ಯದಲ್ಲಿದ್ದ ಬೊಲೆರೊ ಪೊಲೀಸ್ ವಾಹನಕ್ಕೆ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಡಿಕ್ಕಿಯ ತೀವ್ರತೆಗೆ ವಾಹನ ಸಂಪೂರ್ಣ ಜಖಂಗೊಂಡಿದ್ದು, ಎಪಿಆರ್ ಸಿಬ್ಬಂದಿಗಳಾದ ಕಾಶಿರಾಮ್ ಭೋಯಿ, ದೇವದತ್ತ ಸಾ, ಡ್ರಿಲ್ ಸಬ್ ಇನ್ಸ್‌ಪೆಕ್ಟರ್ ನಿರಂಜನ್ ಕುಜುರ್, ಹವೀಲ್ದಾರ್ ಲಿಂಗರಾಜ್ ಧುರೂವಾ ಹಾಗೂ ಹೋಮ್ ಗಾರ್ಡ್ ಭಕ್ತಬಂಧು ಮಿರ್ಧಾ ಮೃತಪಟ್ಟಿದ್ದಾರೆ.

ಇದನ್ನೂ ಓದಿ:

ಗಾಯಗೊಂಡ ಮೂವರು ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಝಾರ್ಸುಗುಡಾ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಡಾಲ ರಾಘವೇಂದ್ರ ರೆಡ್ಡಿ ಮಾಹಿತಿ ನೀಡಿದ್ದು, ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !