ಹೊಸದಿಗಂತ ವರದಿ, ಮಡಿಕೇರಿ:
ರಾಜ್ಯದಲ್ಲಿ ಮುಂದೆ ದಲಿತ ನಾಯಕರೇ ಸಿಎಂ ಆಗಬೇಕು ಸಚಿವ ಹೆಚ್.ಸಿ ಮಹದೇವಪ್ಪ ಪುನರುಚ್ಛರಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ದಲಿತರಿದ್ದಾರೆ. ಅವರು ಸದಾ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಬೆನ್ನೆಲುಬು ಕಳೆದುಕೊಂಡು ಪಕ್ಷ ಬಲವಾಗಿ ಇರಲು ಸಾಧ್ಯವಿಲ್ಲ. ಈ ಬೆನ್ನೆಲುಬನ್ನು ಬಲಪಡಿಸಬೇಕೆಂದರೆ ದಲಿತ ನಾಯಕರು ಸಿಎಂ ಆಗಬೇಕೆಂಬ ತೀರ್ಮಾನ ಆಗಬೇಕು. ಹೈಕಮಾಂಡ್ ಕೂಡಾ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ದಲಿತ ಸಿಎಂ ಕೂಗು ಇನ್ನೂ ಹೈಕಮಾಂಡ್ ಮಟ್ಟಕ್ಕೆ ಮುಟ್ಟಿಲ್ಲ. ಸಿದ್ದರಾಮಯ್ಯ ಅವರು ಇನ್ನೂ ಅಧಿಕಾರದಲ್ಲಿರುವುದರಿಂದ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಸೂಕ್ತ ದಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕು. ದಲಿತ ನಾಯಕರ ಆಯ್ಕೆಯಲ್ಲಿ ಯಾವುದೇ ಗೊಂದಲಗಳು ಇರಬಾರದು ಎಂದು ಮಹದೇವಪ್ಪ ಪ್ರತಿಪಾದಿಸಿದರು.
ತನ್ನ ಶ್ರಮಕ್ಕೆ ಸರಿಯಾದ ರೀತಿಯಲ್ಲಿ ಹೈಕಮಾಂಡ್ ಸ್ಥಾನಮಾನ ನೀಡಲಿದೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹೇವಪ್ಪ ಅವರು, ಪ್ರತಿಯೊಬ್ಬರಲ್ಲೂ ಅಸೆ ಆಕಾಂಕ್ಷೆಗಳು ಇರುತ್ತವೆ. ಅದು ತಪ್ಪು ಎಂದು ಹೇಳಲು ಆಗುವುದಿಲ್ಲ. ಆದರೆ ಪ್ರತಿಯೊಂದನ್ನೂ ಹೈಕಮಾಂಡ್ ಪರಾಮರ್ಶೆ ಮಾಡಲಿದೆ ಎಂದು ಹೇಳಿದರು.



