ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾ ಇರಾನ್ ಸಂಘರ್ಷ ತಾರಕಕ್ಕೇರಿದ್ದು, ಉಭಯದೇಶಗಳ ನಡುವಿನ ಸಮರ ಯುದ್ದಕ್ಕೆ ಕಾಲುಕೆರೆದು ಸರ್ವಸನ್ನದ್ದವಾಗುವಂತೆ ಮಾಡುವಲ್ಲಿ ನಿಂತಿದೆ. ಇದರ ನಡುವೆ ಇರಾನ್ ನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತೆ ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಹೊಸ ಸೆಮಿಸ್ಟರ್ ಪ್ರಾರಂಭವಾಗುತ್ತಿದ್ದಂತೆ ಟೆಹ್ರಾನ್‌ನ ಷರೀಫ್ ತಂತ್ರಜ್ಞಾನ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಕ್ಯಾಂಪಸ್‌ಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.
ಮೊದಲ ದಿನವೇ ವಿದ್ಯಾರ್ಥಿಗಳು ತರಗತಿಯ ಕೋಣೆಗಳನ್ನು ಬಿಟ್ಟು ಕ್ಯಾಂಪಸ್ ಸುತ್ತಲೂ ಜಮಾಯಿಸಿದ್ದು, ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲೆಗಾರ ನಾಯಕ, ಸರ್ವಾಧಿಕಾರಿಗೆ ಸಾವು, ನಮಗೆ ಸ್ವಾಂತಂತ್ರ್ಯ ಬೇಕು, ಫಾರ್ಸಿ ಭಾಷೆಯಲ್ಲಿ ಬೈ ಶರಫ್ ಎಂದರೆ ʼಅವಮಾನಕರʼ ಎಂದೆಲ್ಲಾ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಇರಾನ್ ನಲ್ಲಿ ಈಗಾಗಲೇ ಕುಸಿದಿರುವ ಆರ್ಥಿಕ ಪರಿಸ್ಥಿತಿಯೊಂದಿಗೆ ಯುವ ವಿದ್ಯಾರ್ಥಿಗಳು ಪದವಿಧರರಾಗಿ ಹೊರ ಬಂದ ಮೇಲೆ ಉದ್ಯೋಗಗಳು ದೊರೆಯದೆ ಇರುವ ದೇಶಿಯ ಮಾರುಕಟ್ಟೆ ವಿರುದ್ದ ಸಹ ತಮ್ಮ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಟೆಹ್ರಾನ್ ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ನಾವು “ಅಸ್ತಿತ್ವದಲ್ಲಿಲ್ಲದ ಭವಿಷ್ಯಕ್ಕಾಗಿ ಅಧ್ಯಯನ ಮಾಡುತ್ತೇವೆ” ಎಂದು ಫಲಕಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ಮತ್ತು ಈ ವರ್ಷದ ಜನವರಿಯಲ್ಲಿ ನಡೆದ ಪ್ರತಿಭಟನೆಗಳು ಇತ್ತೀಚಿನ ಪ್ರತಿಭಟನೆಗೆ ಬುನಾದಿಯಾಗಿದೆ. ಆರಂಭದಲ್ಲಿ, ಕಳಪೆ ಆರ್ಥಿಕತೆ ಮತ್ತು ಹಣದುಬ್ಬರವನ್ನು ಪ್ರತಿಭಟಿಸಲು ಜನರು ಬೀದಿಗಿಳಿದಿದ್ದರು.
ಇತ್ತ ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಪ್ರತಿಭಟನೆಗಳು ನಡೆಯುತ್ತಿವೆ. ಮುಂದಿನ 10-15 ದಿನಗಳಲ್ಲಿ ಒಪ್ಪಂದಕ್ಕೆ ಬರದಿದ್ದರೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕ ತನ್ನ ವಿಮಾನವಾಹಕ ನೌಕೆಗಳಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಅನ್ನು ಮಧ್ಯಪ್ರಾಚ್ಯದಲ್ಲಿ ತಂದು ನಿಲ್ಲಿಸಿದೆ. ಹೀಗಿರುವಾಗ ಮತ್ತೆ ದೇಶದಲ್ಲಿ ಆಂತರಿಕವಾಗಿ ಪರಿಸ್ಥಿತಿ ಹದಗೆಟ್ಟರೆ ಯುದ್ದಶುರುವಾಗುವಲ್ಲಿ ಮತ್ತಷ್ಟು ಉತ್ತೇಜನ ನೀಡಲಿದ್ದು ಖಮೇನಿ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ನೋಡಬೇಕಿದೆ.



