March 24, 2026
Tuesday, March 24, 2026
spot_img

ಹಾಸ್ಟೆಲ್‌ನಲ್ಲಿ ಕಂಪ್ಲೆಂಟ್‌ ಮಾಡಿದ್ದಕ್ಕೆ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಹೊಟ್ಟೆಗಿಟ್ಟ ರೂಮ್‌ಮೇಟ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಇಬ್ಬರು ವಿದ್ಯಾರ್ಥಿಗಳು ಸೇರಿ ಇಸ್ತ್ರಿ ಪೆಟ್ಟಿಗೆಯಿಂದ ಮತ್ತೊಬ್ಬ ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ಸುಟ್ಟಿದ್ದಾರೆ. ಇದರಿಂದ ಆ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರ ಪ್ರದೇಶದ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿ ಆಗಸ್ಟ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಮೊರಂಪುಡಿಯಲ್ಲಿರುವ ಖಾಸಗಿ ಶಾಲೆಯ ಹಾಸ್ಟೆಲ್ ಕೋಣೆಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಪಾಠಿಗಳು ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ಐರನ್ ಬಾಕ್ಸ್ ಬಿಸಿ ಮಾಡಿ ಇಟ್ಟಿದ್ದು ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಸ್ಟ್ 16ರಂದು ಹಾಸ್ಟೆಲ್ ಮಕ್ಕಳಿಗಾಗಿ ಹಾಸ್ಟೆಲ್‌ನಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ಇದಾದ ನಂತರ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿದ್ದ ಸಿಸಿಟಿವಿಯನ್ನು ತೆಗೆದು ಈ ಸಂತ್ರಸ್ತ ಬಾಲಕನ ಶಾಲೆಯ ಬ್ಯಾಗ್‌ನಲ್ಲಿ ಇಟ್ಟಿದ್ದಾರೆ. ಇತ್ತ ಸಿಸಿಟಿವಿ ಕಾಣದೇ ಹೋಗಿದ್ದರಿಂದ ಹಾಸ್ಟೆಲ್ ಇನ್‌ಚಾರ್ಜ್ ಅವರು ಈ ಮೂವರು ವಿದ್ಯಾರ್ಥಿಗಳನ್ನು ಕರೆದು ವಿಚಾರಿಸಿದ್ದಾರೆ. ಈ ವೇಳ ಸಂತ್ರಸ್ತ ವಿದ್ಯಾರ್ಥಿ ತನ್ನ ಸಹಪಾಠಿಗಳೇ ಈ ಕೃತ್ಯವೆಸಗಿದ್ದಾಗಿ ಅವರ ಮುಂದೆ ಬಾಯ್ಬಿಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಆ ಇಬ್ಬರು ವಿದ್ಯಾರ್ಥಿಗಳು ಆಗಸ್ಟ್ 18ರಂದು ತಮ್ಮ ಹಾಸ್ಟೆಲ್ ರೂಮ್‌ನಲ್ಲಿ ಐರನ್ ಬಾಕ್ಸ್ ಬಿಸಿ ಮಾಡಿ ಬಾಲಕನ ಕೈ ಹಾಗೂ ಹೊಟ್ಟೆಗೆ ಇಟ್ಟಿದ್ದಾರೆ.

ಇತ್ತ ಹಾಸ್ಟೆಲ್ ಸಿಬ್ಬಂದಿಗೆ ಈ ವಿಚಾರ ಗಮನಕ್ಕೆ ಬಂದಿಲ್ಲ, ಅಥವಾ ನಿರ್ಲಕ್ಷ್ಯ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಬಾಲಕನ ತಾಯಿ ಆತನನ್ನು ನೋಡುವುದಕ್ಕೆಂದು ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ಮಗನ ಕೈಯಲ್ಲಿ ಸುಟ್ಟಿರುವ ಗಾಯದ ಗುರುತುಗಳಿರುವುದನ್ನು ನೋಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ನಂತರ ತಾಯಿ ಮಗನನ್ನು ಕರೆದುಕೊಂಡು ಹೋಗಿ ರಾಝೊಲೆ ಪ್ರದೇಶದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಬಾಲಕನ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗಂಡ ಕೇವಲ 3 ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ ಈಗ ನಾನು ಮಗನನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಅವರು ಕಣ್ಣೀರಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !