ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 2 ರಂದು ದೇಶಾದ್ಯಂತ ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ರಾಜ್ಘಾಟ್ ಮತ್ತು ವಿಜಯ್ ಘಾಟ್ಗೆ ಭೇಟಿ ನೀಡಿ ಈ ಮಹಾನ್ ವ್ಯಕ್ತಿಗಳಿಗೆ ಗೌರವ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು ಮುಂಜಾನೆಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನೋತ್ಸವದ ಅಂಗವಾಗಿ ರಾಜ್ಘಾಟ್ನಲ್ಲಿರುವ ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಅಲ್ಲಿ ಆಯೋಜಿಸಲಾಗಿದ್ದ ಸರ್ವಧರ್ಮ ಪ್ರಾರ್ಥನಾ ಸಭೆಯಲ್ಲೂ ಭಾಗವಹಿಸಿ ಬಾಪೂಜಿಯವರ ಶಾಂತಿ, ಅಹಿಂಸೆ ಮತ್ತು ಸ್ವಚ್ಛತೆಯ ಸಂದೇಶಗಳನ್ನು ಸ್ಮರಿಸಿದರು.
ಇದಾದ ನಂತರ, ಪ್ರಧಾನಿಯವರು ನೇರವಾಗಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಸ್ಥಳವಾದ ವಿಜಯ್ ಘಾಟ್ಗೆ ಭೇಟಿ ನೀಡಿದರು. ಶಾಸ್ತ್ರೀಜಿಯವರ ಜನ್ಮದಿನದ ಅಂಗವಾಗಿ ಗೌರವ ವಂದನೆ ಸಲ್ಲಿಸಿದ ಮೋದಿ, ದೇಶದ ಹೆಮ್ಮೆಗಾಗಿ ಮತ್ತು ರೈತ ಹಾಗೂ ಸೈನಿಕರ ಏಳಿಗೆಗಾಗಿ ಅವರು ನೀಡಿದ ಕೊಡುಗೆಯನ್ನು ನೆನೆದರು. ಶಾಸ್ತ್ರೀಜಿಯವರ ಸರಳತೆ, ಪ್ರಾಮಾಣಿಕತೆ ಹಾಗೂ ಅವರು ನೀಡಿದ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ಇಂದಿಗೂ ಭಾರತೀಯರಲ್ಲಿ ದೇಶಭಕ್ತಿ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಿದೆ ಎಂದು ಪ್ರಧಾನಿ ಶ್ಲಾಘಿಸಿದರು.
ಈ ಇಬ್ಬರೂ ಮಹನೀಯರ ಜನ್ಮದಿನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನಸಾಮಾನ್ಯರು ಹಾಗೂ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಗೌರವ ನಮನ ಸಲ್ಲಿಸುತ್ತಿದ್ದಾರೆ.



