ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ ಗಾಂಧೀಜಿಯವರ 157ನೇ ಜನ್ಮದಿನೋತ್ಸವ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಂಜಾನೆಯೇ ದೆಹಲಿಯ ರಾಜ್ಘಾಟ್ ಮತ್ತು ವಿಜಯ್ ಘಾಟ್ಗೆ ಭೇಟಿ ನೀಡಿ ದೇಶದ ಪರವಾಗಿ ಈ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದರು.
ರಾಜಧಾನಿ ದೆಹಲಿ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲೂ ಇಂದು ಸ್ವಚ್ಛತೆ, ಜನಸೇವೆ ಹಾಗೂ ಮಹನೀಯರ ಆದರ್ಶಗಳನ್ನು ಸ್ಮರಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಂಜಾನೆ ರಾಜ್ಘಾಟ್ಗೆ ಭೇಟಿ ನೀಡಿ ಬಾಪೂ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ, ಅಲ್ಲಿ ಆಯೋಜಿಸಲಾಗಿದ್ದ ‘ಸರ್ವಧರ್ಮ ಪ್ರಾರ್ಥನಾ ಸಭೆ’ಯಲ್ಲಿ ಪಾಲ್ಗೊಂಡರು.
ಸಾಮಾಜಿಕ ಜಾಲತಾಣ ‘X’ ನಲ್ಲಿ ದೇಶದ ಜನತೆಗೆ ಸಂದೇಶ ನೀಡಿದ ಅವರು, ʼಇಂದು ಜಗತ್ತಿನ ಹಲವು ಭಾಗಗಳಲ್ಲಿ ಯುದ್ಧ ಮತ್ತು ಸಂಘರ್ಷದ ವಾತಾವರಣ ತಲೆದೂರಿ ಎಲ್ಲಾ ರಾಷ್ಟ್ರಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶಗಳು ಇಡೀ ಜಗತ್ತಿಗೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವ ನಮ್ಮ ರಾಷ್ಟ್ರೀಯ ಗುರಿಯು ಗಾಂಧೀಜಿಯವರ ‘ಸರ್ವೋದಯ’ ತತ್ವವನ್ನೇ ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದರು.
ದೇಶಾದ್ಯಂತ ಹರಿದುಬಂದ ಗೌರವದ ಮಹಾಪೂರ
ದೆಹಲಿಯ ರಾಜ್ಘಾಟ್ನಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು.
ಇದನ್ನೂ ಓದಿ:
ರಾಜಸ್ಥಾನದ ಸಚಿವಾಲಯದಲ್ಲಿ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಗೌರವ ವಂದನೆ ಸಲ್ಲಿಸಿದರೆ, ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಹಾಗೂ ಗುರುಗ್ರಾಮದಲ್ಲಿ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಮಾದರಿಯಾದರು.ಇತ್ತ ಆಂಧ್ರಪ್ರದೇಶದ ವಿಜಯವಾಡದಲ್ಲಿ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಭಾಗವಾಗಿ ಬೃಹತ್ ‘ಸ್ವಚ್ಛತಾಥಾನ್ 2026’ ಓಟವನ್ನು ಆಯೋಜಿಸಲಾಗಿತ್ತು.



