ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ .
ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತವಿರೋಧಿ ಕಾಯ್ದೆಗಳನ್ನು ಹೋರಾಟದ ಫಲವಾಗಿ ರದ್ದುಗೊಳಿಸಲಾಯಿತು. ಅದೇ ರೀತಿಯಲ್ಲಿ ಈ ಹೋರಾಟ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ರಾಜ್ಯದ ಜನರೆಲ್ಲರೂ ನಮ್ಮ ಜೊತೆಯಾಗಬೇಕು. ಹಳ್ಳಿಗಾಡಿನ ಜನರಿಗೆ ಅನುಕೂಲ ಕಲ್ಪಿಸುವ ಮನರೇಗಾ ಯೋಜನೆಯ ಮರುಸ್ಥಾಪಿಸುವ ಕಾಂಗ್ರೆಸ್ ನ ಸಾರ್ಥಕ ಉದ್ದೇಶಕ್ಕೆ ಜನರು ಬೆಂಬಲಿಸಬೇಕು ಎಂದರು.
ಇಂದು ದೇಶಾದ್ಯಂತ ‘ಮನರೇಗಾ ವನ್ನು ಉಳಿ’ ಅಭಿಯಾನ ಪ್ರಾರಂಭಿಸಲಾಗಿದೆ.ಕೇಂದ್ರ ಸರ್ಕಾರ ಮನರೆಗಾ ವನ್ನು ರದ್ದುಪಡಿಸಿ, ವಿಬಿಜಿರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ. ಇದರಿಂದ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದರು.
ಕೂಲಿಕಾರರು, ಆದಿವಾಸಿಗಳು, ಸಣ್ಣರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನರೇಗಾ ಕಾಯ್ದೆ ಜಾರಿಯಾಯಿತು. ಇದೇ ಕಾಯ್ದೆಯಲ್ಲದೇ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಆದರೆ ಈ ಎಲ್ಲ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು.
ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮಾಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. ಗ್ರಾಮಪಂಚಾಯತಿ ಮತ್ತು ಗ್ರಾಮಸಭೆಗಳು ನಿರ್ಧರಿಸುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಕೇಂದ್ರದ ಅನುದಾನ , ಅನುಮತಿ ಇಲ್ಲದೇ , ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸವಾಗಲು ಸಾಧ್ಯ. ಆದ್ದರಿಂದ ಮನರೇಗಾ ವನ್ನು ಮುಂದುವರೆಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಒತ್ತಾಯವಾಗಿದೆ ಎಂದರು.



