ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಭವನದಲ್ಲಿ ಇಂದು ಸ್ವತಂತ್ರ ಭಾರತದ ಮೊದಲ ಗವರ್ನರ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಾವರಣಗೊಳಿಸಿದರು.
ಇಲ್ಲಿನ ಅಶೋಕ್ ಮಂಟಪದ ಬಳಿಯ ಗ್ರ್ಯಾಂಡ್ ಓಪನ್ ಮೆಟ್ಟಿಲುಗಳ ಮೇಲೆ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟ್ಯೆನ್ಸ್ ಅವರ ಪ್ರತಿಮೆ ಸ್ಥಾಪಿಸಲಾಗಿತ್ತು. ಇದೀಗ ಲುಟೆನ್ಸ್ ಅವರ ಪ್ರತಿಮೆಯನ್ನು ಬದಲಾಯಿಸಿ ಆ ಜಾಗದಲ್ಲಿ ಸ್ವತಂತ್ರ ಭಾರತದ ಮೊದಲ ಗವರ್ನರ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ.
ಈ ಮೂಲಕ ಬ್ರಿಟಿಷ್ ಆಡಳಿತವು ಭಾರತೀಯರಲ್ಲಿ ಬೆಳೆಸಿದ್ದ ಗುಲಾಮಗಿರಿ ಮನಸ್ಥಿತಿಯನ್ನು ಒಂದರಮೇಲೊಂದರಂತೆ ಮೋದಿ ಸರ್ಕಾರ ಬದಲಾವಣೆ ಮಾಡುತ್ತಿದ್ದಾರೆ.

ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಂಡಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚಿಗೆ ವ್ಯಕ್ತಪಡಿಸಿದ್ದು, ನಮ್ಮ ದೇಶಕ್ಕೆ ದುಡಿದವರನ್ನು ಗೌರವಿಸಲು ಮತ್ತು ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ತೆಗೆದುಹಾಕುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುವ ಶ್ಲಾಘನೀಯ ಪ್ರಯತ್ನ. ರಾಜಾಜಿ ಒಬ್ಬ ಅತ್ಯುನ್ನತ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ಆಡಳಿತಗಾರರಾಗಿದ್ದರು. ಅವರ ಜೀವನವು ಸಮಗ್ರತೆ, ಬುದ್ಧಿಶಕ್ತಿ ಮತ್ತು ರಾಷ್ಟ್ರಕ್ಕೆ ಅಚಲ ಬದ್ಧತೆಯನ್ನು ಒಳಗೊಂಡಿತ್ತು ಎಂದು ಪೋಸ್ಟ್ ಮಾಡಿದ್ದಾರೆ.
ಸಿ. ರಾಜಗೋಪಾಲಾಚಾರಿ ಯಾರು?
ತಮಿಳುನಾಡಿನ ಚಕ್ರವರ್ತಿ ರಾಜಗೋಪಾಲಾಚಾರಿ (1878–1972) ಭಾರತದ ಪ್ರಮುಖ ಭಾರತೀಯ ರಾಜನೀತಿಜ್ಞ, ವಕೀಲ ಮತ್ತು ಬರಹಗಾರರಾಗಿದ್ದರು. ಮಹಾತ್ಮ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದ ಇವರು ಭಾರತವು ಗಣರಾಜ್ಯವಾಗುವ ಮೊದಲು ಗವರ್ನರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದರು.
1930 ರಲ್ಲಿ ಅವರು ಗಾಂಧಿಯವರ ದಂಡಿ ಸತ್ಯಾಗ್ರಹದಂತೆ ತಮಿಳುನಾಡಿನಲ್ಲಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಿದ್ದರು. 1954 ರಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಪುರಸ್ಕರಿಸಿತ್ತು. 1950 ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಇವರು 1959 ರಲ್ಲಿ ಅವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿ ನೆಹರೂ ಅವರ ಸಮಾಜವಾದಿ ನೀತಿಗಳನ್ನು ವಿರೋಧಿಸಿದ್ದರು.



