ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ನ ಸೂಪರ್-8ರ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮಾಯೆರ್ ಸ್ಪೋಟಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡ, ಜಿಂಬಾಬ್ವೆ ಎದುರು 107 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಮೂಲಕ ಕೆರಿಬಿಯನ್ನರು ಅಂತಿಮ ಎಂಟರ ಹಂತದಲ್ಲಿ ಶುಭಾರಂಭ ಕಂಡಿದ್ದಾರೆ.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ದಂತದ ದೈತ್ಯ ತಂಡವನ್ನು ನಡುಗಿಸಿದ್ದ ಜಿಂಬಾಬ್ವೆ 17.4 ಓವರ್‌ಗಳಿಗೆ 147 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ವೆಸ್ಟ್ ಇಂಡೀಸ್ ನೀಡಿದ್ದ 255 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, 52 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗಲೇ ಸೋಲು ಖಚಿತವಾಗಿತ್ತು. ಹೀಗಿದ್ದರೂ ಕೊನೆಯಲ್ಲಿ ಬ್ರಾಡ್ ಇವಾನ್ಸ್ ಸ್ಫೋಟಕ 43 ರನ್(21 ಎಸೆತ, 2 ಬೌಂಡರಿ, 5 ಸಿಕ್ಸ್) ಸಿಡಿಸಿ ಸೋಲಿನ ಅಂತರವನ್ನು ಸ್ವಲ್ಪ ತಗ್ಗಿಸಿದರು.
ಜಿಂಬಾಬ್ವೆ ಪರ ಬ್ರಾಡ್ ಎವಾನ್ಸ್ ಕೊನೆಯವರೆಗೂ ಹೋರಾಟ ನಡೆಸಿ 21 ಎಸೆತಗಳಲ್ಲಿ 43 ರನ್ ಸಿಡಿಸಿ ಕೊನೆಯಲ್ಲಿ ಔಟ್ ಆಗಿದ್ದರು ಹಾಗೂ ಇವರು ಜಿಂಬಾಬ್ವೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಡಿಯಾನ್ ಮೇಯರ್‌ಸ್ 28 ರನ್ ಹಾಗೂ ನಾಯಕ ಸಿಕಂದರ್ ರಾಜಾ 27 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು.
254 ರನ್ ಕಲೆ ಹಾಕಿದ ವಿಂಡೀಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್ ತಂಡ, ಶಿಮ್ರಾನ್ ಹೆಟ್ಮಾಯೆರ್ (85 ರನ್) ಹಾಗೂ ರೊವ್ಮನ್ ಪೊವೆಲ್ (59 ರನ್) ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತ್ತು.



