ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಲಾಭಾಂಶದ ಹೆಸರಿನಲ್ಲಿ ಜನರನ್ನು ಸೆಳೆಯುತ್ತಿದ್ದ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಭೇದಿಸಿದೆ.
ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂನಲ್ಲಿರುವ ಖಾಸಗಿ ಕಚೇರಿಯಲ್ಲಿ ಕಾಲ್ ಸೆಂಟರ್ ಮಾದರಿಯಲ್ಲಿ ಈ ದಂಧೆ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:
ಗುಜರಾತ್ ಮೂಲದ ಕುಮಾವತ್ ಯೋಗೇಶ್ ಅಮರರಾಮ್ ಹಾಗೂ ದೆಹಲಿ ಮೂಲದ ಇಮ್ರಾನ್ ಬಂಧಿತರಾಗಿದ್ದಾರೆ. ಇವರಿಂದ 31 ಮೊಬೈಲ್‌ಗಳು, 13 ಲ್ಯಾಪ್‌ಟಾಪ್‌ಗಳು, 16 ಸಿಮ್ ಕಾರ್ಡ್‌ಗಳು ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
‘ಮಲ್ಟಿವೇವ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಲ್ಲಿ ಹೊರರಾಜ್ಯದ 15ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿ ಜನರಿಂದ ಹಣ ವರ್ಗಾವಣೆ ಮಾಡಿಸುತ್ತಿದ್ದರು. ಹಣ ಜಮಾ ಆದ ಬಳಿಕ ಸಂಪರ್ಕ ಕಡಿತಗೊಳಿಸುವುದು ಇವರ ಸಾಮಾನ್ಯ ತಂತ್ರವಾಗಿತ್ತು.
ಐಎಂಇಐ ಸಂಖ್ಯೆ ಮತ್ತು ಇಮೇಲ್ ಐಡಿ ಆಧರಿಸಿ ಡಿಜಿಟಲ್ ಫೊರೆನ್ಸಿಕ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.



