ಹೊಸದಿಗಂತ ವರದಿ ಮುಂಡಗೋಡ:
ಮುಂಡಗೋಡ ತಾಲೂಕಿನ ನೂರಾನಿಗಲ್ಲಿಯ ರೌಡಿ ಜಮೀರ್ ಅಹ್ಮದ್ ನಜೀರ್ ಅಹ್ಮದ್ ದರ್ಗಾವಾಲೆ ಮೇಲೆ ಖಾರದ ಪುಡಿ ಎರಚಿ, ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದು ಪ್ರಮುಖ ಆರೋಪಿಯ ಮೇಲೆ ಕೋಕಾ ಕಾಯ್ದೆ ಹಾಕಿ ತನಿಖೆ ಕೈಗೊಂಡಿದೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.90/2026, ಕಲಂ 103(1) ಸಹಿತ 3(5) ಬಿ.ಎನ್ ಎಸ್ -2023 ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು.
ಖಚಿತ ಮಾಹಿತಿ ಹಾಗೂ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಜುನಾಥ ಕಾಜಗಾರ, ಶ್ರೀಕಾಂತ ಕಿರಣ್ಣನವರ, ಮಂಜುನಾಥ ಬೆಳಗಾಂವ, ಅಭಿಷೇಕ ಬಡಶೆಟ್ಟಿ, ದೀಪಕ ನವಲೆ, ದಿಲ್‌ರಾಜ, ತನ್ನೀರ ಅಹಮ್ಮದ, ಮಲ್ಲಿಕ ಜಹಾನ@ಜಹೀರ ಶಭೀರ ಶೇಖ, ಮಹಮ್ಮದ ಸಾಧಿಕ, ಅಸ್ಕರಲಿ ಮತ್ತೊಮ್ ಅಲಿ ದೊಡ್ಡನಿ ಹಾಗೂ ಸಾಹೀಲ್ ನಂದಿಗಟ್ಟಿ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ಬಂಧಿತರಿಂದ ಮೂರು ಪಿಸ್ತೂಲ್‌ಗಳು, ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ ಇತರೆ ಪ್ರಮುಖ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ:
ತನಿಖೆ ವೇಳೆ ಪ್ರಮುಖ ಆರೋಪಿ ಮಂಜುನಾಥ ಕಾಜಗಾರ ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಒಳಗೊಂಡ ಸಂಘಟಿತ ಗುಂಪಿನೊಂದಿಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕೊಲೆ, ಕೊಲೆ ಯತ್ನ, ಡಕಾಯಿತಿ, ಸುಲಿಗೆ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ), 2000ರ ಕಲಂ 3 ಅನ್ನು ಪ್ರಕರಣಕ್ಕೆ ಅಳವಡಿಸಿಕೊಳ್ಳಲು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಂದ ಅನುಮೋದನೆ ಪಡೆಯಲಾಗಿದೆ. ಬಳಿಕ ಆರೋಪಿಗಳನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ತನಿಖೆ ಮುಂದುವರಿದಿದೆ.
ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.



