August 14, 2026
Friday, August 14, 2026
spot_img

ಸ್ವಾತಂತ್ರೋತ್ಸವಕ್ಕೆ ಇನ್ನಷ್ಟು ಸಿಹಿ ನೀಡಿದ ಕುಕ್ಕೆ ಕ್ಷೇತ್ರ: 3 ಲಕ್ಷ ರೂ. ವೆಚ್ಚದಲ್ಲಿ 161 ಸಂಸ್ಥೆಗಳಿಗೆ 60 ಸಾವಿರ ಲಾಡು ವಿತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಡಿಗೆ ನಾಡೇ ಸ್ವಾತಂತ್ರೋತ್ಸವಕ್ಕೆ ಸಜ್ಜುಗೊಂಡಿದ್ದು, ಉತ್ಸವದ ಸಂಭ್ರಮ ಹೆಚ್ಚಿಸಲು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೂಡಾ ಬರೋಬ್ಬರಿ 60 ಸಾವಿರ ಲಡ್ಡುಗಳೊಂದಿಗೆ ರೆಡಿಯಾಗಿದೆ!

80ನೇ ಸ್ವಾತಂತ್ರೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸುಮಾರು 161 ಸಂಸ್ಥೆಗಳಿಗೆ ದೇವಾಲದಿಂದ 60 ಸಾವಿರ ಲಾಡನ್ನು ವಿತರಿಸಲಾಗುತ್ತಿದೆ. ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಈ ಲಡ್ಡುಗಳನ್ನು ತಯಾರಿಸಲಾಗಿದೆ. ಶನಿವಾರ ಕುಕ್ಕೆ ದೇವಳದ ವತಿಯಿಂದ ಆಯಾಯ ಸ್ಥಳಗಳಲ್ಲಿ ಇದರ ವಿತರಣೆ ನಡೆಯಲಿದೆ. ಕಳೆದ ವರ್ಷ ಸ್ವಾತಂತ್ರೋತ್ಸವಕ್ಕೆ ೩೮ ಸಾವಿರ ವಿತರಣೆ ನಡೆಸಲಾಗಿತ್ತು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್. ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಲಡ್ಡು ತಯಾರಿಕೆಗೆ ವಿಶೇಷ ವ್ಯವಸ್ಥೆ ಮಾಡಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಜಿತ್ ಕುಮಾರ್, ಪ್ರವೀಣ ರೈ ಮರುವಂಜ, ಸೌಮ್ಯಾ ಭರತ್, ಸಿಬ್ಬಂದಿಗಳಾದ ನಿಂಗಣ್ಣ, ರೋಹಿತ್, ಎಲ್ಲಪ್ಪ, ಸ್ಪರ್ಷ ಇತರ ದೇವಳದ ಸಿಬ್ಬಂದಿಗಳು ಲಾಡು ತಯಾರಿಕಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಿದ್ದರು.

ಸುಮಾರು 20ಕ್ಕೂ ಅಧಿಕ ಬಾಣಸಿಗರು ಕಳೆದು ಎರಡು ದಿನಗಳಿಂದ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಕಾರ್ಯಪ್ರವೃತ್ತರಾಗಿ 60 ಸಾವಿರ ಲಾಡು ತಯಾರಿಸಿದ್ದಾರೆ. ಸುಳ್ಯ, ಪುತ್ತೂರು, ಕಡಬ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಶಾಲೆ, ಕಾಲೇಜು, ಸರಕಾರಿ ಕಚೇರಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ದೇವಳದಿಂದ ಸಿಹಿತಿಂಡಿ ಈಗಾಗಲೇ ವಿತರಿಸಲಾಗಿದೆ. ಸುಮಾರು 161 ಸಂಸ್ಥೆಗಳಿಗೆ ಅವುಗಳು ಸಲ್ಲಿಸಿರುವ ಬೇಡಿಕೆಯ ಆಧಾರದ ಮೇಲೆ ಲಾಡುಗಳನ್ನು ವಿತರಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿಗಳು, ತಾಲೂಕು ಕಚೇರಿಗಳು, ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸೇರಿವೆ.

ಇದನ್ನೂ ಓದಿ:



ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜು, ಕೆ.ಎಸ್.ಎಸ್ ಕಾಲೇಜು, ಕುಮಾರಸ್ವಾಮಿ ವಿದ್ಯಾಲಯ, ಸೇರಿದಂತೆ ಸುಬ್ರಹ್ಮಣ್ಯದ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು, ವಸತಿ ಶಾಲೆ, ಕಡಬ ತಹಶೀಲ್ದಾರ್ ಕಚೇರಿ, ಕಡಬ ತಾಲೂಕು ಪಂಚಾಯತ್, ಸುಳ್ಯ ತಹಶೀಲ್ದಾರ್ ಕಚೇರಿ, ಪಟ್ಟಣ ಪಂಚಾಯತ್ ಸುಳ್ಯ, ಯೇನೆಕಲ್ಲು ಸಹಕಾರಿ ಸಂಘ, ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ಪೋಲೀಸ್ ಠಾಣೆ, ಬಿಳಿನೆಲೆ ಗ್ರಾಮ ಪಂಚಾಯತ್, ಕಲ್ಮಡ್ಕ ಗ್ರಾ.ಪಂ , ಮುರುಳ್ಯ ಗ್ರಾ.ಪಂ., ಕುಟ್ರುಪ್ಪಾಡಿ ಗ್ರಾ.ಪಂ, ಬಲ್ಯ ಗ್ರಾ.ಪಂ., ಬೆಳಂದೂರು ಗ್ರಾ.ಪಂ. ಬಳ್ಪ, ಪೆರುವಾಜೆ, ಅಜ್ಜಾವರ, ಸುಬ್ರಹ್ಮಣ್ಯ ಮೊದಲಾದ ಗ್ರಾ.ಪಂ ವ್ಯಾಪ್ತಿಯ ಸರಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಲಾಡು ವಿತರಿಸಲಾಗಿದೆ. ಸುಳ್ಯ, ಕಡಬ, ಪುತ್ತೂರು ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಿಗೆ ಲಾಡು ವಿತರಣೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !