July 18, 2026
Saturday, July 18, 2026
spot_img

ಭಾಷೆ ಯಾವುದಾದರೇನು, ಮಾಹಿತಿ ಮುಖ್ಯ: ಉರ್ದು ವಿವಾದಕ್ಕೆ ಆರೋಗ್ಯ ಸಚಿವರ ಖಡಕ್ ಪ್ರತ್ಯುತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ಎಂಬ ನಿಯಮವಿದ್ದರೂ, ಆರೋಗ್ಯ ಇಲಾಖೆಯು ಸರ್ಕಾರಿ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ ಪ್ರಕಟಿಸಿರುವುದು ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ಮತ್ತು ಹೊಸ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗಾಗಿ ಆರೋಗ್ಯ ಇಲಾಖೆ ಇಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರಿಕೆಯನ್ನು ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಉರ್ದು ಭಾಷೆಯಲ್ಲೂ ಪ್ರಕಟಿಸಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಪರ ಸಂಘಟನೆಗಳ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ಆಕ್ಷೇಪಕ್ಕೆ ಕಾರಣವಾಯಿತು.

ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

“ನಾವು ಕೇವಲ ಉರ್ದುವಿನಲ್ಲಿ ಮಾತ್ರ ಆಹ್ವಾನ ಪತ್ರಿಕೆ ನೀಡಿಲ್ಲ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲೂ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಉರ್ದು ಮಾತನಾಡುವ ಜನರೂ ಇದ್ದಾರೆ, ಅವರಿಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ತಲುಪಲಿ ಎಂಬ ಉದ್ದೇಶದಿಂದ ಉರ್ದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ.”

ಇದು ‘ಮುಸ್ಲಿಂ ಮತಗಳ ಓಲೈಕೆ’ ಎಂಬ ಟೀಕೆಗಳಿಗೆ ಉತ್ತರಿಸಿದ ಸಚಿವರು, “ಇದರಲ್ಲಿ ಓಲೈಕೆ ಏನಿದೆ? ಹಿಂದಿಯಲ್ಲಿ ಬರೆದರೆ ಅಥವಾ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿದರೆ ಅದು ಓಲೈಕೆಯಾಗುತ್ತದೆಯೇ? ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡುವುದು ಸರ್ಕಾರದ ಕರ್ತವ್ಯ. ಎಲ್ಲರಿಗೂ ಸುಲಭವಾಗಿ ಅರ್ಥವಾಗಲಿ ಎಂದು ವಿವಿಧ ಭಾಷೆಗಳನ್ನು ಬಳಸಲಾಗಿದೆ,” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !