ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಥವಾ ಪರ್ಯಾಯ ನಾಯಕತ್ವದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಆಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ. “ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲಾ ರೀತಿಯಿಂದಲೂ ಸಮರ್ಥ” ಎಂಬ ಪರೋಕ್ಷ ಸಂದೇಶವನ್ನು ಹೈಕಮಾಂಡ್ ಹಾಗೂ ವಿರೋಧಿಗಳಿಗೆ ರವಾನಿಸಿದ್ದಾರೆ.
ತಮ್ಮ ರಾಜಕೀಯ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪರಮೇಶ್ವರ್, “ನಾನು ಎಷ್ಟು ಬಾರಿ ನನ್ನ ಯೋಗ್ಯತೆಯನ್ನು ಸಾಬೀತುಪಡಿಸಬೇಕು? ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅನುಭವ ನನಗಿದೆ. ಸಾಮರ್ಥ್ಯವಿಲ್ಲದಿದ್ದರೆ ಇವೆಲ್ಲವೂ ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಎಲ್ಲವೂ ಸನ್ನಿವೇಶ ಮತ್ತು ಪಕ್ಷದ ತೀರ್ಮಾನದ ಮೇಲೆ ಅವಲಂಬಿತವಾಗಿರುತ್ತದೆ. ಸಿಎಂ ಆಗಲು ಬೇಕಾದ ಎಲ್ಲಾ ಅರ್ಹತೆಗಳು ನನ್ನಲ್ಲಿವೆ” ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ.



