February 26, 2026
Thursday, February 26, 2026
spot_img

ಕಾಳಿ ನದಿಯಲ್ಲಿ ಮೊಸಳೆ ಅಟ್ಟಹಾಸ: ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿದ ಎಮ್ಮೆ!

ಹೊಸದಿಗಂತ ದಾಂಡೇಲಿ:

ನಗರದ ಹಳಿಯಾಳ ರಸ್ತೆಯ 3ನೇ ಗೇಟ್ ವಿನಾಯಕ ನಗರದ ಸಮೀಪದ ಕಾಳಿ ನದಿಯಲ್ಲಿ ಗುರುವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನದಿ ತೀರದಲ್ಲಿದ್ದ ಎಮ್ಮೆಯ ಮೇಲೆ ಮೊಸಳೆಯೊಂದು ಹಠಾತ್ ದಾಳಿ ನಡೆಸಿ, ಅದನ್ನು ನೀರಿನೊಳಗೆ ಎಳೆಯಲು ಪ್ರಯತ್ನಿಸಿದೆ.

ಮೊಸಳೆ ದಾಳಿ ಮಾಡುತ್ತಿದ್ದಂತೆಯೇ ದಡದಲ್ಲಿದ್ದ ಸ್ಥಳೀಯರು ಜೋರಾಗಿ ಬೊಬ್ಬೆ ಹಾಕಿದ್ದಾರೆ. ಜನರ ಕೂಗಾಟಕ್ಕೆ ಹೆದರಿದ ಮೊಸಳೆ ಎಮ್ಮೆಯನ್ನು ಅರ್ಧಕ್ಕೆ ಬಿಟ್ಟು ನದಿಯೊಳಗೆ ಮರೆಯಾಗಿದೆ. ದಾಳಿಯ ತೀವ್ರತೆಗೆ ಎಮ್ಮೆಯ ಕಾಲು ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದವು.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ತಕ್ಷಣ ನಗರಸಭೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗಾಯಗೊಂಡ ಎಮ್ಮೆಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಬಳಿಕ ಅದನ್ನು ಸುಭಾಷ್ ನಗರದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಗೋರಕ್ಷಕರ ಆಶ್ರಯಕ್ಕೆ ತಲುಪಿಸಲಾಯಿತು.

ಸದ್ಯ ಗೋರಕ್ಷಕರಾದ ಶ್ರೀನಾಥ ಪಾಸಲ್ಕರ, ಸಚಿನ್ ದೊಂದ್ವಾಡೆ, ವೈಭವ್ ಭಜಂತ್ರಿ ಸೇರಿದಂತೆ ಯುವಕರ ತಂಡ ಎಮ್ಮೆಯ ಆರೈಕೆಯಲ್ಲಿ ತೊಡಗಿದೆ. ಪಶುವೈದ್ಯ ಇಲಾಖೆಯ ವೈದ್ಯರನ್ನು ಸ್ಥಳಕ್ಕೆ ಕರೆಸಿ, ಗಾಯಗೊಂಡ ಎಮ್ಮೆಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !