February 27, 2026
Friday, February 27, 2026
spot_img

ಖಜಾನೆ ಖಾಲಿ, ಮೀಸಲಾತಿಯಲ್ಲಿ ಗೊಂದಲ: ಎಡವಟ್ಟು ಮುಚ್ಚಿಕೊಳ್ಳಲು ಸರ್ಕಾರದಿಂದ ನಾಟಕ!

ಹೊಸದಿಗಂತ ಚಿತ್ರದುರ್ಗ:

ರಾಜ್ಯ ಸರ್ಕಾರವು ತನ್ನ ಆರ್ಥಿಕ ವೈಫಲ್ಯ ಹಾಗೂ ಖಾಲಿಯಾಗಿರುವ ಖಜಾನೆಯನ್ನು ಮುಚ್ಚಿಕೊಳ್ಳಲು ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಈ ಮೂಲಕ ಯುವಜನರ ಮತ್ತು ವಿದ್ಯಾರ್ಥಿಗಳ ಕನಸಿನ ಮೇಲೆ ಮಣ್ಣು ಸುರಿಯುವ ಕೆಲಸ ಮಾಡುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ತೀವ್ರವಾಗಿ ಟೀಕಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.

“ಮುಂದಿನ 30 ದಿನಗಳಲ್ಲಿ 56,422 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಶೇ. 56ರ ಮೀಸಲಾತಿ ಮತ್ತು ಒಳ ಮೀಸಲಾತಿ ಎರಡನ್ನೂ ಗಾಳಿಗೆ ತೂರಲಾಗಿದೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ದ್ರೋಹ,” ಎಂದು ಅವರು ಕಿಡಿಕಾರಿದರು.

“ಸಿದ್ದರಾಮಯ್ಯನವರ ಸರ್ಕಾರ ಆರ್ಥಿಕವಾಗಿ ಹದಗೆಟ್ಟಿದೆ. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಹಲವು ಇಲಾಖೆಗಳ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ಸಾರಿಗೆ ಮತ್ತು ಆರೋಗ್ಯ ಇಲಾಖೆಯ ನೌಕರರ ನೂರಾರು ಕೋಟಿ ಬಾಕಿ ಹಣವನ್ನು ಸರ್ಕಾರ ಉಳಿಸಿಕೊಂಡಿದೆ,” ಎಂದು ದೂರಿದರು.

2022ರಿಂದ ಜಾರಿಯಲ್ಲಿದ್ದ ಹೆಚ್ಚುವರಿ ಮೀಸಲಾತಿಯನ್ನು ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಜಾರ್ಖಂಡ್ ಹಾಗೂ ಛತ್ತೀಸ್‌ಗಢ ರಾಜ್ಯಗಳ ಮಾದರಿಯನ್ನು ಉಲ್ಲೇಖಿಸಿದ ಅವರು, ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಮೇಲೆ ಬದ್ಧತೆ ಇಲ್ಲದಂತಾಗಿದೆ ಎಂದರು.

ಸರ್ಕಾರ ತನ್ನ ಅಹಂಕಾರ ಬಿಟ್ಟು, ರಾಜ್ಯಪಾಲರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕು. ಈ ಕೂಡಲೇ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಮೀಸಲಾತಿ ಮತ್ತು ನೇಮಕಾತಿ ಗೊಂದಲಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಕಾರಜೋಳ ಒತ್ತಾಯಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ. ಮುರಳಿ, ಮೋಹನ್ ಕುಮಾರ್ ಸೇರಿದಂತೆ ಹಲವು ಗಣ್ಯ ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !