ಒಮ್ಮೆ ಯೋಚಿಸಿ ನೋಡಿದ್ದೀರಾ…
ಕೆಲವು ಪ್ರಶ್ನೆಗಳಿಗೆ ನಾವು ತಕ್ಷಣ ಉತ್ತರ ಹುಡುಕುತ್ತೇವೆ. “ಇದು ಯಾಕಾಯ್ತು?”, “ನನ್ನ ಜೊತೆಯೇ ಯಾಕೆ ಹೀಗೆ?”, “ಇದಕ್ಕೆ ಅರ್ಥ ಏನು?” ಅನ್ನೋ ಪ್ರಶ್ನೆಗಳು ಮನಸ್ಸನ್ನು ಬಿಡೋದಿಲ್ಲ. ಅದೇ ಕ್ಷಣದಲ್ಲಿ ಉತ್ತರ ಬೇಕು ಅನ್ನಿಸುತ್ತದೆ. ಆದರೆ ಜೀವನ ಅಷ್ಟು ಬೇಗ ಉತ್ತರ ಕೊಡುವುದಿಲ್ಲ.
ಕೆಲ ಸಂದರ್ಭಗಳು ಆಗುವಾಗ ಅವು ಕೇವಲ ನೋವಾಗಿಯೇ ಕಾಣಿಸುತ್ತವೆ. ಏನೂ ಅರ್ಥವಾಗೋದಿಲ್ಲ. ಯಾಕೆ ಆ ವ್ಯಕ್ತಿ ದೂರವಾದರು, ಯಾಕೆ ಆ ಅವಕಾಶ ಕೈ ತಪ್ಪಿತು, ಯಾಕೆ ಆ ದಿನ ಎಲ್ಲವೂ ಬದಲಾಗಿಬಿಟ್ಟಿತು ಆಗ ಉತ್ತರವೇ ಸಿಗೋದಿಲ್ಲ. ಮನಸ್ಸು ಅದೆಲ್ಲದರ ಬಗ್ಗೆ ಸಾವಿರ ಬಾರಿ ಯೋಚಿಸುತ್ತಿರುತ್ತದೆ.
ಇದನ್ನೂ ಓದಿ:
ಆದರೆ ವಿಚಿತ್ರ ಏನೆಂದರೆ, ಕೆಲವು ತಿಂಗಳುಗಳ ನಂತರ ಅಥವಾ ವರ್ಷಗಳ ನಂತರ ಅದೇ ಘಟನೆಗೆ ಹಿಂದೆ ತಿರುಗಿ ನೋಡಿದಾಗ ಉತ್ತರ ನಿಧಾನವಾಗಿ ಸ್ಪಷ್ಟವಾಗುತ್ತದೆ. ಆಗ ಅರ್ಥವಾಗುತ್ತದೆ ಆ ನೋವು ಒಂದು ಪಾಠವಾಗಿತ್ತು, ಆ ನಷ್ಟ ಒಂದು ಹೊಸ ದಾರಿಗೆ ಕರೆದೊಯ್ದಿತ್ತು, ಆ ತಿರುವೇ ನಮ್ಮ ಬೆಳವಣಿಗೆಯ ಆರಂಭವಾಗಿತ್ತು.
ಜೀವನದಲ್ಲಿ ಕೆಲವು ಉತ್ತರಗಳು ನಾವು ಕೇಳಿದ ಕ್ಷಣಕ್ಕೆ ಸಿಗೋದಿಲ್ಲ. ಅವು ಸಮಯದ ಜೊತೆ ಮಾತ್ರ ಬರುತ್ತವೆ. ಅನುಭವ, ದೂರ, ಮೌನ ಇವೆಲ್ಲವೂ ಸೇರಿ ಒಂದು ದಿನ ಆ ಪ್ರಶ್ನೆಗೆ ಉತ್ತರ ಕೊಡುತ್ತವೆ.
ಹೀಗಾಗಿ ಪ್ರತಿಯೊಂದು ಪ್ರಶ್ನೆಗೆ ತಕ್ಷಣ ಉತ್ತರ ಹುಡುಕೋ ಒತ್ತಡ ಬೇಡ. ಕೆಲ ಉತ್ತರಗಳು ಸಮಯದ ಕೈಯಲ್ಲಿ ಇರುತ್ತವೆ. ಅವು ನಮಗೆ ಬೇಕಾದಾಗ ಅಲ್ಲ… ನಮಗೆ ಅರ್ಥವಾಗುವ ಸಮಯ ಬಂದಾಗ ಮಾತ್ರ ಸಿಗುತ್ತವೆ.



