ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಒಂದು ಹುಣ್ಣಿಮೆ ಬರುವುದು ವಾಡಿಕೆ. ಆದರೆ, ಅಪರೂಪಕ್ಕೊಮ್ಮೆ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಸಂಭವಿಸುತ್ತವೆ. ಈ ರೀತಿ ಎರಡನೇ ಬಾರಿಗೆ ಕಾಣಿಸಿಕೊಳ್ಳುವ ಪೂರ್ಣ ಚಂದಿರನನ್ನು ‘ಬ್ಲೂ ಮೂನ್’ ಎಂದು ಕರೆಯಲಾಗುತ್ತದೆ.
ಚಂದಿರನ ಚಕ್ರವು ಸುಮಾರು 29.5 ದಿನಗಳ ಕಾಲ ಇರುತ್ತದೆ. ಆದರೆ ನಮ್ಮ ಕ್ಯಾಲೆಂಡರ್ ತಿಂಗಳುಗಳು 30 ಅಥವಾ 31 ದಿನಗಳಿರುತ್ತವೆ. ಈ ವ್ಯತ್ಯಾಸದಿಂದಾಗಿ ಪ್ರತಿ 2.5 ರಿಂದ 3 ವರ್ಷಗಳಿಗೊಮ್ಮೆ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುತ್ತವೆ.
ಹೆಸರೇ ಸೂಚಿಸುವಂತೆ ಚಂದಿರನು ಇಲ್ಲಿ ನೀಲಿ ಬಣ್ಣಕ್ಕೆ ತಿರುಗುವುದಿಲ್ಲ! ಇದು ಕೇವಲ ಒಂದು ಅಪರೂಪದ ವಿದ್ಯಮಾನಕ್ಕೆ ಇಟ್ಟಿರುವ ಹೆಸರು. ಆದರೆ, ವಾತಾವರಣದಲ್ಲಿ ಅತಿಯಾದ ಧೂಳು ಅಥವಾ ಜ್ವಾಲಾಮುಖಿಯ ಹೊಗೆ ಇದ್ದಾಗ ಚಂದಿರ ಅಲ್ಪ ಪ್ರಮಾಣದಲ್ಲಿ ನೀಲಿ ಛಾಯೆ ಪಡೆದ ಉದಾಹರಣೆಗಳಿವೆ.
ಇಂಗ್ಲಿಷ್‌ನಲ್ಲಿ “Once in a blue moon” ಎಂಬ ನಾಣ್ಣುಡಿಯೇ ಇದೆ, ಅಂದರೆ ಬಹಳ ಅಪರೂಪಕ್ಕೆ ಸಂಭವಿಸುವ ಘಟನೆ ಎಂದರ್ಥ.
ಕೆಲವೊಮ್ಮೆ ಬ್ಲೂ ಮೂನ್ ದಿನದಂದೇ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುತ್ತಾನೆ. ಆಗ ಚಂದಿರ ಸಾಮಾನ್ಯಕ್ಕಿಂತ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಇದನ್ನು ‘ಸೂಪರ್ ಬ್ಲೂ ಮೂನ್’ ಎನ್ನಲಾಗುತ್ತದೆ.



