ಹೊಸದಿಗಂತ ಕಾರವಾರ:
ದೇಶದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಕೇಂದ್ರವು ಈಗ ವಿಸ್ತರಣೆಯ ಹೊಸ ಹಂತಕ್ಕೆ ಕಾಲಿಟ್ಟಿದೆ. ಸುಮಾರು 21 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ಕಾಂಕ್ರೀಟೀಕರಣ ಕಾರ್ಯಕ್ಕೆ ಭಾರತೀಯ ಅಣು ಶಕ್ತಿ ಆಯೋಗದ ಅಧ್ಯಕ್ಷರಾದ ಡಾ. ಅಜಿತ್ ಕುಮಾರ್ ಮೊಹಂತಿ ಅವರು ಭಾನುವಾರ ಚಾಲನೆ ನೀಡಿದರು.

ಕೈಗಾ ಅಣು ವಿದ್ಯುತ್ ಕೇಂದ್ರವು 2000ನೇ ಇಸವಿಯಲ್ಲಿ ತನ್ನ ಮೊದಲ ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಇಲ್ಲಿ ತಲಾ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸರ್ಕಾರವು ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಹೊಸ ಘಟಕಗಳ (ಘಟಕ 5 ಮತ್ತು 6) ನಿರ್ಮಾಣಕ್ಕೆ 2025ರಲ್ಲಿ ಹಸಿರು ನಿಶಾನೆ ತೋರಿಸಿತ್ತು.
ಈ ಹೊಸ ಘಟಕಗಳ ನಿರ್ಮಾಣ ಕಾರ್ಯವನ್ನು 2030ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಘಟಕಗಳು ಕಾರ್ಯಾರಂಭ ಮಾಡಿದರೆ ರಾಜ್ಯ ಮತ್ತು ರಾಷ್ಟ್ರದ ವಿದ್ಯುತ್ ಜಾಲಕ್ಕೆ ಬೃಹತ್ ಪ್ರಮಾಣದ ಪರಿಸರ ಸ್ನೇಹಿ ಅಣು ಶಕ್ತಿ ಸೇರ್ಪಡೆಯಾಗಲಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ಅವರೊಂದಿಗೆ NPCIL ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್, ಕೈಗಾ ಸೈಟ್ ಡೈರೆಕ್ಟರ್ ಬಿ. ವಿನೋದ್ ಕುಮಾರ್ ಮತ್ತು ಘಟಕ 5 ಹಾಗೂ 6ರ ನಿರ್ದೇಶಕ ಕುಲಕರ್ಣಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



