ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹಾಗೂ ಹಾಲಿನ ದರ ಹೆಚ್ಚಳದ ನಿರ್ಧಾರವನ್ನು ಖಂಡಿಸಿ ಭಾರತೀಯ ಜನತಾ ಪಕ್ಷ (BJP) ಗುರುವಾರ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ನಿಯೋಗವು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಸಿಸಿ ನಿಲ್ದಾಣಗಳಿಗೆ ಭೇಟಿ ನೀಡಿ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿತು.
ಇಂದಿನಿಂದಲೇ ಬಸ್ ಟಿಕೆಟ್ ದರ ದುಬಾರಿ
ರಾಜ್ಯ ಸಾರಿಗೆ ಸಂಸ್ಥೆಗಳು ಪ್ರಕಟಿಸಿರುವ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ನಷ್ಟದ ನೆಪವೊಡ್ಡಿ ಕೆಎಸ್‌ಆರ್‌ಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ಸಂಸ್ಥೆಗಳ ವ್ಯಾಪ್ತಿಯ ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ಬಸ್ ದರಗಳನ್ನು ಸರಾಸರಿ ಶೇಕಡಾ 23 ರಷ್ಟು ಹೆಚ್ಚಿಸಲಾಗಿದೆ. ಇನ್ನು ರಾಜಧಾನಿಯ ಬಿಎಂಸಿಸಿ ಬಸ್ ಟಿಕೆಟ್ ದರದಲ್ಲಿ ಶೇಕಡಾ 33 ರಿಂದ 35 ರಷ್ಟು ಭಾರೀ ಏರಿಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಿಂದ ನೆಲಮಂಗಳ ಮತ್ತು ಹೊಸಕೋಟೆಗೆ ಇದ್ದ 35 ದರವು 44 ಕ್ಕೆ ಹಾಗೂ ದೊಡ್ಡಬಳ್ಳಾಪುರ ಮತ್ತು ಆನೇಕಲ್ ಪ್ರಯಾಣ ದರವು 38 ರಿಂದ 47 ಕ್ಕೆ ಏರಿಕೆಯಾಗಲಿದೆ.
ಕಾರ್ಮಿಕ ಸಂಘಟನೆಗಳ ತೀವ್ರ ಖಂಡನೆ
ಬೆಲೆ ಏರಿಕೆಯ ಈ ನಿರ್ಧಾರವನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಕಟ್ಟುನಿಟ್ಟಾಗಿ ಖಂಡಿಸಿದೆ. ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, “ಕೆಲವೇ ದಿನಗಳ ಹಿಂದೆಯಷ್ಟೇ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹಾಗೂ ಮೊಸರಿನ ಬೆಲೆಯನ್ನು 14 ರೂಪಾಯಿ ಹೆಚ್ಚಿಸಲಾಗಿತ್ತು. ಈಗ ಸಾರಿಗೆ ದರವನ್ನು ಏರಿಸಿರುವುದು ಜನವಿರೋಧಿ ನೀತಿಯಾಗಿದೆ” ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:
ಸರ್ಕಾರದ ನೀತಿಗೆ ಆಕ್ಷೇಪ
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದ್ದು, ಬರಗಾಲದಿಂದಾಗಿ ಗ್ರಾಮೀಣ ಭಾಗದ ಜನರ ಜೀವನ ಈಗಾಗಲೇ ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಸರ್ಕಾರದ ತಪ್ಪು ನೀತಿಗಳು ಮತ್ತು ಇಲಾಖೆಗಳಲ್ಲಿನ ಸೋರಿಕೆಯೇ ಕಾರಣವೇ ಹೊರತು ಸಾರ್ವಜನಿಕರಲ್ಲ ಎಂದು ಎಐಯುಟಿಯುಸಿ ಪ್ರತಿಪಾದಿಸಿದೆ. ಸಾರಿಗೆ ನಷ್ಟದ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸುವುದನ್ನು ನಿಲ್ಲಿಸಿ, ಹೆಚ್ಚಿಸಲಾದ ದರವನ್ನು ತಕ್ಷಣವೇ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ರೂಪಿಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.



