ಹೊಸದಿಗಂತ ಡಿಜಿಟಲ್ ಡೆಸ್ಕ್
ಟಿ20 ವಿಶ್ವಕಪ್ನ ಸೂಪರ್-8 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ 5 ರನ್ಗಳ ಜಯ ಸಾಧಿಸಿದರೂ, ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ವಿಶ್ವಕಪ್ ಗೆಲ್ಲುವ ಪಾಕಿಸ್ತಾನದ ಹಂಬಲಕ್ಕೆ ತೆರೆ ಬಿದ್ದಿದೆ.
ಸೆಮಿಫೈನಲ್ಗೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಕೇವಲ ಗೆಲುವು ಸಾಕಿರಲಿಲ್ಲ. ಮೊದಲು ಬ್ಯಾಟ್ ಮಾಡಿ 212 ರನ್ ಗಳಿಸಿದ್ದ ಪಾಕಿಸ್ತಾನ, ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಬೇಕಾದರೆ ಶ್ರೀಲಂಕಾವನ್ನು 147 ರನ್ ಒಳಗೆ ಕಟ್ಟಿಹಾಕಬೇಕಿತ್ತು. ಆದರೆ ಚೇಸಿಂಗ್ ವೇಳೆ ಅಬ್ಬರಿಸಿದ ಶ್ರೀಲಂಕಾ 207 ರನ್ ಕಲೆಹಾಕಿತು. ಕೇವಲ 5 ರನ್ ಸೋಲೊಪ್ಪಿಕೊಂಡರೂ, ಪಾಕಿಸ್ತಾನದ ಸೆಮಿಫೈನಲ್ ಅವಕಾಶವನ್ನು ಶ್ರೀಲಂಕಾ ಕಿತ್ತುಕೊಂಡಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಸಲ್ಮಾನ್ ಅಲಿ ಅಘಾ, ಸೋಲಿಗೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
“ಟಾಸ್ ಗೆದ್ದಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ದ್ವಿತೀಯ ಇನಿಂಗ್ಸ್ನಲ್ಲಿ ಇಬ್ಬನಿ ಹೆಚ್ಚಿದ್ದರಿಂದ ಬೌಲರ್ ಫ್ರೆಂಡ್ಲಿ ಪರಿಸ್ಥಿತಿ ಇರಲಿಲ್ಲ. ಇಂತಹ ಸ್ಥಿತಿಯಲ್ಲಿ ಎದುರಾಳಿಯನ್ನು 148 ರನ್ಗಳಿಗೆ ನಿರ್ಬಂಧಿಸುವುದು ಕಷ್ಟದ ಕೆಲಸ. ಇಡೀ ಟೂರ್ನಿಯಲ್ಲಿ ಸಾಹಿಬ್ಝಾದ ಫರ್ಹಾನ್ ಒಬ್ಬರೇ ಅದ್ಭುತವಾಗಿ ಆಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸರಿಯಾದ ಸಾಥ್ ನೀಡಿದ್ದರೆ ಫಲಿತಾಂಶ ಬದಲಾಗುತ್ತಿತ್ತು.” ಎಂದು ಹೇಳಿದ್ದಾರೆ.



