ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಕಾವೇರಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಡಿಕೆ ಶಿವಕುಮಾರ್ ಅವರು ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರು “ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್” ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಭದ್ರತಾ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ, ಹೆಲಿಕಾಪ್ಟರ್ ಸಮೀಪಕ್ಕೆ ಜನರನ್ನು ಬಿಟ್ಟಿದ್ದಕ್ಕಾಗಿ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಬಹಳ ಜಾಣ್ಮೆಯಿಂದ ಉತ್ತರಿಸಿದರು. “ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು” ಎನ್ನುವ ಮೂಲಕ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಉಳಿಸಿಕೊಂಡರು. “ನಿಮ್ಮ ಶ್ರಮಕ್ಕೆ ಶೀಘ್ರವೇ ಫಲ ಸಿಗಲಿದೆಯೇ?” ಎಂಬ ಪತ್ರಕರ್ತರ ಮರುಪ್ರಶ್ನೆಗೆ, ಮುಗುಳ್ನಗುತ್ತಲೇ “ಇಲ್ಲಿಗೆ ಬಂದಿದ್ದೇನಲ್ಲಾ, ನೋಡೋಣ ಮಾತನಾಡೋಣ” ಎಂದು ಉತ್ತರಿಸಿ ಅಲ್ಲಿಂದ ನಿರ್ಗಮಿಸಿದರು.



