March 1, 2026
Sunday, March 1, 2026
spot_img

ಇರಾನ್-ಇಸ್ರೇಲ್ ಸಮರ: ದುಬೈನಲ್ಲಿ ಬಾಲಿವುಡ್ ನಟಿ ದಿಗ್ಬಂಧನ, ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಟ್ವೀಟ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕದ ಹಸ್ತಕ್ಷೇಪದಿಂದಾಗಿ ಪರಿಸ್ಥಿತಿ ಕೈಮೀರುತ್ತಿದೆ. ಈ ಯುದ್ಧದ ಭೀತಿಯು ಇಡೀ ಗಲ್ಫ್ ರಾಷ್ಟ್ರಗಳನ್ನು ಆವರಿಸಿದ್ದು, ದುಬೈ ಹಾಗೂ ಅಬುದಾಭಿಯಲ್ಲಿರುವ ಸಾವಿರಾರು ಭಾರತೀಯರು ಆತಂಕದ ದಿನಗಳನ್ನು ಕಳೆಯುತ್ತಿದ್ದಾರೆ. ಇವರ ನಡುವೆ ಬಾಲಿವುಡ್ ನಟಿ ಸೋನಲ್ ಚೌಹಾಣ್ ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದು, ತಾಯ್ನಾಡಿಗೆ ಮರಳಲು ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊರೆ ಇಟ್ಟಿದ್ದಾರೆ.

ಸದ್ಯ ದುಬೈನಲ್ಲಿರುವ ಸೋನಲ್ ಚೌಹಾಣ್, ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಹಾರಾಟಗಳು ದಿಢೀರ್ ರದ್ದಾಗಿರುವುದರಿಂದ ಅಲ್ಲಿಯೇ ಬಾಕಿಯಾಗಿದ್ದಾರೆ. ಸಂಘರ್ಷದ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಭೀತಿಗೊಂಡಿರುವ ಅವರು, ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಭಾರತ ಸರ್ಕಾರದ ಸಹಾಯ ಕೋರಿದ್ದಾರೆ.

“ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ನಾನು ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಸಿಲುಕಿಕೊಂಡಿದ್ದೇನೆ. ಇಲ್ಲಿ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ, ಹೀಗಾಗಿ ಭಾರತಕ್ಕೆ ಮರಳಲು ಯಾವುದೇ ದಾರಿಯಿಲ್ಲದೆ ಸಂಕಷ್ಟದಲ್ಲಿದ್ದೇನೆ. ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲವನ್ನು ಯಾಚಿಸುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡಿ,” ಎಂದು ಸೋನಲ್ ಟ್ವೀಟ್ ಮಾಡಿದ್ದಾರೆ.

ನಟಿ ಸೋನಲ್ ಚೌಹಾಣ್ ಅವರು ಈ ಟ್ವೀಟ್ ಅನ್ನು ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದು, ತುರ್ತು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಕಾರಣ, ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರ ತೀವ್ರ ನಿಗಾ ವಹಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !