ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುಎಸ್ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಜಂಟಿಯಾಗಿ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಭಾನುವಾರ ಇಂಡಿಯನ್ ಏರ್ ಲೈನ್ಸ್ ನ 350 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ವಾಯುಪ್ರದೇಶದ ಬಂದ್ ಮತ್ತು ಭದ್ರತಾ ಕಾಳಜಿಯೊಂದಿಗೆ ಏರ್ ಇಂಡಿಯಾ ಮತ್ತು ಇಂಡಿಗೋ ಸಹ ಈ ವಾಯುಪ್ರದೇಶಗಳನ್ನು ಬಳಸುವ ತಮ್ಮ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಉಂಟಾದ ವಾಯುಪ್ರದೇಶ ನಿರ್ಬಂಧ ಹಿನ್ನೆಲೆಭಾರತದ ವಿಮಾನಯಾನ ಸಂಸ್ಥೆಗಳಿಂದ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 350 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಸದ್ಯ 350 ವಿಮಾನಗಳನ್ನು ರದ್ದುಪಡಿಸಲಾಗಿದೆ. ಶನಿವಾರವೂ ದೇಶಿಯ ವಿಮಾನಯಾನ ಸಂಸ್ಥೆಗಳ 410 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ರದ್ದುಗೊಳಿಸಲಾದ ವಿಮಾನಗಳ ಬಗ್ಗೆ ಏರ್ ಇಂಡಿಯಾ ಹಾಗೂ ಸ್ಪೆಸ್ ಜೆಟ್ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿವೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಬೇಕಿದ್ದ ಮತ್ತು ಅಲ್ಲಿಂದ ಬರುವ ವಿಮಾನಗಳ ಹಾರಾಟವನ್ನು ಮಾರ್ಚ್ 2ರವರೆಗೂ ವಿಸ್ತರಿಸಿದೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಒದಗಿಸುವಂತೆ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಇತರ ಪಾಲುದಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.



