ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರಿನ ಮುಕುಟಕ್ಕೆ ಈಗ ವಿಜ್ಞಾನ ಮತ್ತು ತಂತ್ರಜ್ಞಾನದ ಮತ್ತೊಂದು ಐತಿಹಾಸಿಕ ಗರಿ ಸೇರ್ಪಡೆಯಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಎಲ್‌ಇಡಿ ಡೋಮ್ ತಾರಾಲಯ ‘ಕಾಸ್ಮೋಸ್-ಮೈಸೂರು’ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದ್ದಾರೆ.
ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯು (IIA) ಈ ತಾರಾಲಯವನ್ನು ನಿರ್ಮಿಸಿದ್ದು, ಖಗೋಳ ವಿಜ್ಞಾನದ ಶಿಕ್ಷಣ ಮತ್ತು ತರಬೇತಿ ಕೇಂದ್ರವಾಗಿ ಇದನ್ನು ರೂಪಿಸಲಾಗಿದೆ.
‘ಕಾಸ್ಮೋಸ್-ಮೈಸೂರು’ ತಾರಾಲಯದ ವಿಶೇಷತೆ
ಸಾಮಾನ್ಯವಾಗಿ ಸಾಂಪ್ರದಾಯಿಕ ತಾರಾಲಯಗಳಲ್ಲಿ ಪ್ರೊಜೆಕ್ಟರ್‌ಗಳ ಸಹಾಯದಿಂದ ಗುಮ್ಮಟದ ಮೇಲೆ ಚಿತ್ರಗಳನ್ನು ಮೂಡಿಸಲಾಗುತ್ತದೆ. ಆದರೆ ‘ಕಾಸ್ಮೋಸ್-ಮೈಸೂರು’ ತಾರಾಲಯವು ಈ ಹಳೆಯ ಪದ್ಧತಿಗೆ ಬದಲಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.
ಈ ಅತ್ಯಾಧುನಿಕ ತಾರಾಲಯವು 15 ಮೀಟರ್ ಓರೆಯಾದ ಗುಮ್ಮಟವನ್ನು ಹೊಂದಿದೆ. ಇದರಲ್ಲಿ ಸುಮಾರು 6,150 ಪ್ಯಾನೆಲ್‌ಗಳಿದ್ದು, ಬರೋಬ್ಬರಿ 4.2 ಕೋಟಿ ಪ್ರತ್ಯೇಕ LED ದೀಪಗಳನ್ನು ಅಳವಡಿಸಲಾಗಿದೆ.
ಇದರಲ್ಲಿರುವ LED ಪ್ಯಾನೆಲ್‌ಗಳನ್ನು ನೈಜ ಸಮಯದಲ್ಲಿ ನಿಯಂತ್ರಿಸಬಹುದಾಗಿದೆ. ಇದರಿಂದ ವೀಕ್ಷಕರಿಗೆ ಅಂತರಿಕ್ಷದ ನೈಜ ಅನುಭವ ಸಿಗಲಿದ್ದು, ಖಗೋಳ ವಿಜ್ಞಾನದ ಕಲಿಕೆಗೆ ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ.
ಇದನ್ನೂ ಓದಿ:
ಇಲ್ಲಿನ ‘ಸ್ಕೈ ಥಿಯೇಟರ್’ನಲ್ಲಿ ವೃತ್ತಿಪರವಾಗಿ ನಿರ್ಮಿಸಲಾದ ಖಗೋಳ ವಿಜ್ಞಾನ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ, ಮೈಸೂರಿನ ಇತಿಹಾಸ ಮತ್ತು ಖಗೋಳಶಾಸ್ತ್ರದ ನಡುವಿನ ನಂಟನ್ನು ಪರಿಚಯಿಸುವ ವಿಶೇಷ ಕಿರುಚಿತ್ರವನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಒಟ್ಟಾರೆಯಾಗಿ, ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ತಂತ್ರಜ್ಞಾನ ಮೈಸೂರಿನಲ್ಲಿ ತಲೆ ಎತ್ತಿರುವುದು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಖಗೋಳ ಪ್ರಿಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ.



