ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣಗಳಿಂದ ಆಟವಾಡುವ ವೇಳೆ ಕೆಲವೊಮ್ಮೆ ಕಲರ್ ಕಣ್ಣಿಗೆ ಬೀಳೋದು ಸಾಮಾನ್ಯ. ವಿಶೇಷವಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳು ಕಣ್ಣಿಗೆ ಸೇರಿದರೆ ಉರಿ, ಕಣ್ಣು ಕೆಂಪಾಗೋದು ಹಾಗೂ ನೀರು ಬರುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಗಾಬರಿಯಾಗದೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ.
ಮೊದಲು ಕಣ್ಣುಗಳನ್ನು ಒರೆಸುವ ಅಭ್ಯಾಸ ತಪ್ಪಿಸಬೇಕು. ಒರೆಸಿದರೆ ಕಣ್ಣಿನ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ತಕ್ಷಣ ಸ್ವಚ್ಛವಾದ ತಂಪು ನೀರಿನಿಂದ ಕಣ್ಣನ್ನು ಹಲವಾರು ಬಾರಿ ತೊಳೆಯಬೇಕು. ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ನಿಧಾನವಾಗಿ ನೀರು ಸುರಿದು ಕಣ್ಣು ಶುದ್ಧಪಡಿಸುವುದು ಉತ್ತಮ.
ಇದನ್ನೂ ಓದಿ:
ಕೆಲವರು ರೋಸ್ ವಾಟರ್, ಹಾಲು ಅಥವಾ ಮನೆಮದ್ದುಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ. ಆದರೆ ಇವು ಯಾವಾಗಲೂ ಸುರಕ್ಷಿತವಲ್ಲ.
ಕಾಂಟಾಕ್ಟ್ ಲೆನ್ಸ್ ಧರಿಸಿದ್ದರೆ ಅವುಗಳನ್ನು ಕೂಡಲೇ ತೆಗೆದು ಹಾಕಬೇಕು. ಉರಿ ಅಥವಾ ನೋವು ಮುಂದುವರೆದರೆ ಐ ಡ್ರಾಪ್ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ. ಕೆಂಪಾದರೆ, ದೃಷ್ಟಿ ಮಸುಕಾದರೆ ಅಥವಾ ತೀವ್ರ ನೋವು ಕಂಡುಬಂದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.
ಹಬ್ಬದ ಸಂಭ್ರಮದಲ್ಲಿಯೇ ಸುರಕ್ಷತೆಗೂ ಆದ್ಯತೆ ನೀಡಿದರೆ ಅನಗತ್ಯ ತೊಂದರೆಗಳಿಂದ ದೂರ ಇರಬಹುದು.



