ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷವು ಇಡೀ ಮಧ್ಯಪ್ರಾಚ್ಯವನ್ನು ಆತಂಕಕ್ಕೆ ತಳ್ಳಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರುತ್ತಿರುವ ಈ ಸಂದರ್ಭದಲ್ಲಿ, ಶಾಂತಿ ಮತ್ತು ಸ್ಥಿರತೆ ಸ್ಥಾಪನೆಯಾಗಬೇಕು ಎಂಬುದು ಭಾರತದ ದೃಢ ನಿಲುವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ದುರದೃಷ್ಟವಶಾತ್, ಈ ಸಂಘರ್ಷದ ಬಿಸಿ ಭಾರತೀಯರಿಗೂ ತಟ್ಟಿದ್ದು, ಓಮನ್‌ನಲ್ಲಿ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತದೆ.
ಯಾವುದೇ ಸಂಘರ್ಷಕ್ಕೆ ಯುದ್ಧ ಪರಿಹಾರವಲ್ಲ, ಬದಲಿಗೆ ‘ಮಾತುಕತೆ ಮತ್ತು ರಾಜತಾಂತ್ರಿಕತೆ’ಯಿಂದ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂದು ಮೋದಿ ಪುನರುಚ್ಚರಿಸಿದ್ದಾರೆ.
ಈ ನಿಟ್ಟಿನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮೋದಿ, ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಮನವಿ ಮಾಡಿದ್ದಲ್ಲದೆ, ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರವು ಈಗಾಗಲೇ ವಿವಿಧ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.



