ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಬಳಿಯ ಹಾರ್ಮುಜ್ ಜಲಸಂಧಿ ಸ್ಥಬ್ದವಾಗಿದೆ. ಇದರಿಂದ ಜಾಗತಿಕ ತೈಲ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಒಟ್ಟು ಜಾಗತಿಕ ತೈಲ ವಹಿವಾಟಿನಲ್ಲಿ ಬರೋಬ್ಬರಿ 86%ರಷ್ಟು ಕುಸಿತ ಕಂಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸುಮಾರು 700ಕ್ಕೂ ಹೆಚ್ಚು ತೈಲ ಹಡಗುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ಮ್ಯಾರಿಟೈಮ್ ಅನಾಲಿಟಿಕ್ಸ್ ಸಂಸ್ಥೆಗಳಾದ ವಿಂಡ್‌ವರ್ಡ್ ಮತ್ತು ಕೆಪ್ಲರ್ ದತ್ತಾಂಶಗಳ ಪ್ರಕಾರ, ಈ ಜಲಮಾರ್ಗವನ್ನು ಅಧಿಕೃತವಾಗಿ ಮುಚ್ಚಿಲ್ಲವಾದರೂ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಬಹುತೇಕ ಬಂದ್ ಆದಂತೆ ಎಂದು ಹೇಳಲಾಗುತ್ತಿದೆ. ಮಾರ್ಚ್ 1ರಂದು, ಕೇವಲ 28 ಲಕ್ಷ ಬ್ಯಾರೆಲ್‌ಗಳನ್ನು ಹೊತ್ತ ಮೂರು ಟ್ಯಾಂಕರ್‌ಗಳು ಮಾತ್ರ ಹಾರ್ಮುಜ್ ಜನಸಂಧಿಯನ್ನು ದಾಟಿವೆ. ಇದು 2026ರ ದೈನಂದಿನ ವಹಿವಾಟಿನ ಸರಾಸರಿ 1.98 ಕೋಟಿ ಬ್ಯಾರೆಲ್‌ಗಳ ಪೈಕಿ 86%ರಷ್ಟು ವಹಿವಾಟು ನಿಂತುಹೋಗಿದ್ದು, ಭಾರಿ ಕುಸಿತ ಕಂಡಿದೆ. ಮಾರ್ಚ್ 2 ರ ಮುಂಜಾನೆಯ ವೇಳೆಗೆ, ಕೇವಲ ಒಂದು ಸಣ್ಣ ಟ್ಯಾಂಕರ್ ಮತ್ತು ಒಂದು ಸಣ್ಣ ಸರಕು ಹಡಗು ಮಾತ್ರ ಮುಖ್ಯ ಪಥದಲ್ಲಿ ಚಲಿಸಿವೆ.
ಸುಮಾರು 706 ಇರಾನ್ ಯೇತರ ಟ್ಯಾಂಕರ್‌ಗಳು ಜಲಂಧಿಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿವೆ. ಇದರಲ್ಲಿ 334 ಕಚ್ಚಾ ತೈಲ ಕ್ಯಾರಿಯರ್‌ಗಳು, 109 ಡರ್ಟಿ ಮತ್ತು 263 ಕ್ಲೀನ್ ಪ್ರಾಡಕ್ಟ್ ಹಡಗುಗಳು ಸೇರಿವೆ.
ಸೌದಿ ಅರೇಬಿಯಾದ ರಾಸ್ ತನುರಾ ಸಂಸ್ಕರಣಾಗಾರ ಮತ್ತು ಕತಾರ್‌ನ ಎಲ್‌ಎನ್‌ಜಿ ಘಟಕದ ಮೇಲೆ ನಡೆದ ದಾಳಿಯಿಂದಾಗಿ ಘಟಕಗಳನ್ನು ಮುಚ್ಚಲಾಗಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಏ.10ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ ಸುಮಾರು 80 ಡಾಲರ್‌ಗೆ ತಲುಪಿದೆ.ಇತ್ತ ಯುರೋಪಿಯನ್ ಅನಿಲ ಬೆಲೆಯೂ 40%ಕ್ಕಿಂತ ಹೆಚ್ಚು ಜಿಗಿತ ಕಂಡಿದೆ.
ಈ ಸ್ಥಿತಿ ಹೀಗೆಯೇ ಮುಂದುವರಿದ್ರೆ ವಿಮೆ ಮತ್ತು ಸಾಗಣೆ ವೆಚ್ಚ ಗಗನಕ್ಕೇರಲಿದ್ದು, ಅದು ಡೈರೆಕ್ಟ್ ಆಗಿ ಜಗತ್ತಿನಾದ್ಯಂತ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಪರಿಸ್ಥಿತಿ ನಿಭಾಯಿಸಲು ಏಷ್ಯಾ ಹಾಗೂ ಯುರೋಪ್‌ನ ಸಂಸ್ಕರಣಾಗಾರಗಳು ಅಮೆರಿಕ, ಪಶ್ಚಿಮ ಆಫ್ರಿಕಾ, ಬ್ರೆಜಿಲ್ ಮತ್ತು ರಷ್ಯಾದ ಮೊರೆ ಹೋಗುತ್ತಿವೆ.
ಭಾರತಕ್ಕೇನು ಆತಂಕ?
ದೆಹಲಿಯಲ್ಲಿ ಅಧಿಕಾರಿಗಳು ತುರ್ತು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಅನಿಶ್ಚಿತತೆ ಮುಂದುವರಿದರೆ, ದೇಶೀಯ ಪೂರೈಕೆಯನ್ನು ರಕ್ಷಿಸಲು ಭಾರತವು ಪೆಟ್ರೋಲ್ ಮತ್ತು ಡೀಸೆಲ್ ರಫ್ತನ್ನು ಕಡಿತಗೊಳಿಸಬಹುದು, ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಹೆಚ್ಚಿಸಬಹುದು ಹಾಗೂ ದೇಶದೊಳಗೆ ಇಂಧನ ಪೂರೈಕೆಯಲ್ಲಿ ಎಲ್‌ಪಿಜಿ (LPG) ಪಡಿತರದಂತಹ ಬೇಡಿಕೆ ನಿರ್ವಹಣಾ ಕ್ರಮಗಳನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ತೈಲ ಪೂರೈಕೆಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.. ನಾವು ಬದಲಾಗುತ್ತಿರುವ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳು ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಅಗತ್ಯವಿರುವ ಎಲ್ಲ ಹೆಜ್ಜೆಗಳನ್ನು ಇಡಲಾಗುವುದು ಎಂದು ತೈಲ ಸಚಿವಾಲವು ಸ್ಪಷ್ಟಪಡಿಸಿದೆ.
ಭಾರತವು ತನ್ನ ಸಂಸ್ಕರಿಸಿದ ಇಂಧನಗಳ ಪೈಕಿ ಶೇ.30 ರಷ್ಟು ಪೆಟ್ರೋಲ್ ಹಾಗೂ ಶೇ.25ರಷ್ಟು ಡಿಸೇಲ್ ರಪ್ತು ಮಾಡುತ್ತದೆ. ಆದ್ರೆ ಅಡುಗೆ ಅನಿಲದ ವಿಚಾರದಲ್ಲಿ ಭಾರತ ತನ್ನ ಎಲ್‌ಪಿಸಿ ಅಗತ್ಯದ 80-85% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಬಹುಪಾಲು ಇದೇ ಹಾರ್ಮುಜ್ ಜಲಸಂಧಿಯ ಮೂಲಕ ಗಲ್ಫ್ ರಾಷ್ಟ್ರಗಳಿಂದ ಬರುತ್ತದೆ. ಹಡಗುಗಳ ಸಂಚಾರ ಹೀಗೆಯೇ ನಿಂತರೆ, ಸದ್ಯ ಭಾರತದಲ್ಲಿರುವ ಎಲ್‌ಪಿಜಿ ದಾಸ್ತಾನು ಕೇವಲ ಎರಡು ವಾರಗಳಿಗೆ ಮಾತ್ರ ಸಾಕಾಗಬಹುದು ಎಂದು ಕೈಗಾರಿಕ ವಲಯ ಅಂದಾಜಿಸಿದೆ.
ಸಚಿವ ಪುರಿ ಅವರ ಪ್ರಕಾರ, ಭಾರತದ ಬಳಿ ಕಚ್ಚಾ ತೈಲ ಮತ್ತು ಇತರ ಸಂಸ್ಕರಿಸಿದ ಉತ್ಪನ್ನಗಳನ್ನು ಒಳಗೊಂಡಂತೆ ಸುಮಾರು 74 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ದಾಸ್ತಾನು ಇದೆ. ಇದರಲ್ಲಿ ಕಚ್ಚಾ ತೈಲ 17-18 ದಿನಗಳಿಗೆ ಸಂಸ್ಕರಿಸಿದ ಇಂಧನ 20-21 ದಿನಗಳಿಗೆ ಮತ್ತು ಎಲ್‌ಎನ್‌ಜಿ 10-12 ದಿನಗಳಿಗೆ ಸಾಕಾಗುವಷ್ಟಿದೆ.
ಪಶ್ಚಿಮ ಏಷ್ಯಾದ ಈ ಸಂಘರ್ಷವು ‘ದಿನಗಳಲ್ಲ, ವಾರಗಳ ಕಾಲ’ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಇದು ಭಾರತಕ್ಕೆ ತನ್ನ ದೇಶೀಯ ಇಂಧನ ಭದ್ರತೆ ಮತ್ತು ಜಾಗತಿಕ ರಫ್ತಿನ ನಡುವೆ ಸಮತೋಲನ ಕಾಯ್ದುಕೊಳ್ಳುವ ದೊಡ್ಡ ಸವಾಲನ್ನು ಒಡ್ಡಿದೆ.



