May 4, 2026
Monday, May 4, 2026
spot_img

ಬಂಗಾಳದಲ್ಲಿ ‘ಕಮಲ’ ಕಂಪು, ಕೇರಳದಲ್ಲಿ ‘ಹಸ್ತ’ದ ಹವಾ: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ದರ್ಬಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ರಾಜ್ಯಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಸ್ಥಿತ್ಯಂತರಗಳು ಗೋಚರಿಸುತ್ತಿವೆ.

ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆ ಈ ಬಾರಿ ಕಂಪಿಸಿದಂತೆ ಕಾಣುತ್ತಿದೆ. ಸದ್ಯದ ಟ್ರೆಂಡ್ ಪ್ರಕಾರ, ಬಿಜೆಪಿ 139 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತದತ್ತ ಹೆಜ್ಜೆ ಹಾಕುತ್ತಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 103 ಸ್ಥಾನಗಳಿಗೆ ಸೀಮಿತವಾಗಿದ್ದು, ರಾಜ್ಯದಲ್ಲಿ ಆಡಳಿತ ಬದಲಾವಣೆಯ ಲಕ್ಷಣಗಳು ದಟ್ಟವಾಗಿವೆ.

ಕೇರಳದಲ್ಲಿ ಈ ಬಾರಿ ಎಡರಂಗದ ಸಂಪ್ರದಾಯ ಮುಂದುವರಿಯುವ ಲಕ್ಷಣಗಳಿಲ್ಲ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 84 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅಧಿಕಾರದ ಗದ್ದುಗೆಯ ಸಮೀಪದಲ್ಲಿದೆ. ಹಾಲಿ ಆಡಳಿತಾರೂಢ ಎಲ್‌ಡಿಎಫ್ ಕೇವಲ 50 ಸ್ಥಾನಗಳಲ್ಲಿ ಮಾತ್ರ ಹಿನ್ನಡೆಯಲ್ಲಿದ್ದು, ಮತದಾರರು ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಎರಡು ರಾಜ್ಯಗಳಿಗೆ ಹೋಲಿಸಿದರೆ ಅಸ್ಸಾಂನಲ್ಲಿ ಚಿತ್ರಣ ಭಿನ್ನವಾಗಿದೆ. ಇಲ್ಲಿ ಭಾರತೀಯ ಜನತಾ ಪಕ್ಷದ ಅಧಿಪತ್ಯ ಮುಂದುವರಿದಿದೆ. ಬಿಜೆಪಿ 83 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಕೇಸರಿ ಪಡೆ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಮೈತ್ರಿಕೂಟ ಕೇವಲ 27 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದ್ದು, ಹೀನಾಯ ಸೋಲಿನ ಭೀತಿಯಲ್ಲಿದೆ.

ಒಟ್ಟಾರೆಯಾಗಿ.. ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ದೇಶದ ರಾಜಕೀಯ ಭೂಪಟದಲ್ಲಿ ಹೊಸ ಬದಲಾವಣೆಗಳನ್ನು ತರುವ ಸೂಚನೆ ನೀಡುತ್ತಿವೆ. ಬಂಗಾಳ ಮತ್ತು ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದರೆ, ಅಸ್ಸಾಂನಲ್ಲಿ ಮತದಾರರು ಮತ್ತೆ ಆಡಳಿತಾರೂಢ ಪಕ್ಷಕ್ಕೇ ಜೈ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !