August 30, 2026
Sunday, August 30, 2026
spot_img

ಯುದ್ಧದ ಕಾರ್ಮೋಡ: ಕತಾರ್, ಕುವೈತ್, ಒಮಾನ್ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಕರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದರೆ, ಇತ್ತ ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳು ಇಸ್ರೇಲ್, ಗಲ್ಫ್ ರಾಷ್ಟ್ರಗಳು ಹಾಗೂ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಸಂಘರ್ಷದ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಕಳೆದ 48 ಗಂಟೆಗಳಲ್ಲಿ ಯುಎಇ, ಇಸ್ರೇಲ್, ಸೌದಿ ಅರೇಬಿಯಾ, ಜೋರ್ಡಾನ್, ಬಹ್ರೇನ್, ಒಮಾನ್, ಕುವೈತ್ ಮತ್ತು ಕತಾರ್ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರು ಕತಾರ್‌ನ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತನಾಡಿದ ಮೋದಿ, ಕತಾರ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಅಲ್ಲಿರುವ ಭಾರತೀಯ ಸಮುದಾಯದ ಕಾಳಜಿ ಮತ್ತು ಬೆಂಬಲಕ್ಕಾಗಿ ಅಮೀರ್ ಅವರಿಗೆ ಧನ್ಯವಾದ ತಿಳಿಸಿದರು.

ಈ ಕುರಿತು ಟ್ವೀಟ್ ನಲಿ ಮಾಹಿತಿ ನೀಡಿದ ಮೋದಿ, ‘ನನ್ನ ಸಹೋದರ, ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತನಾಡಿದೆ. ನಾವು ಕತಾರ್‌ನೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಅದರ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಬಲವಾಗಿ ಖಂಡಿಸುತ್ತೇವೆ. ಈ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ತುರ್ತು ಅಗತ್ಯವಿದೆ ಎಂದು ನಾವು ಒತ್ತಿ ಹೇಳಿದ್ದೇವೆ. ಈ ಸವಾಲಿನ ಸಮಯದಲ್ಲಿ ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡುತ್ತಿರುವ ನಿರಂತರ ಬೆಂಬಲ ಮತ್ತು ಕಾಳಜಿಗಾಗಿ ನಾನು ಅವರಿಗೆ ನನ್ನ ಮೆಚ್ಚುಗೆಯನ್ನು ತಿಳಿಸಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಮಾನ್‌ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಮತ್ತು ಕುವೈತ್‌ನ ಕ್ರೌನ್ ಪ್ರಿನ್ಸ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಆಯಾ ದೇಶಗಳ ಮೇಲಿನ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಅಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಕಲ್ಯಾಣ ಮತ್ತು ಭದ್ರತೆಯ ಬಗ್ಗೆ ಚರ್ಚಿಸಿದರು.

ನಿನ್ನೆ ಪ್ರಧಾನಿ ಮೋದಿ ಅವರು ಜೋರ್ಡಾನ್‌ನ ದೊರೆ, ಕಿಂಗ್ ಅಬ್ದುಲ್ಲಾ II ಅವರೊಂದಿಗೆ ಮಾತನಾಡಿದ್ದರು. ಜೋರ್ಡಾನ್ ಜನರ ಶಾಂತಿ, ಭದ್ರತೆ ಮತ್ತು ಯೋಗಕ್ಷೇಮಕ್ಕೆ ಭಾರತದ ಬೆಂಬಲವನ್ನು ಖಚಿತಪಡಿಸಿದ್ದರು.ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಮತ್ತು ಬಹ್ರೇನ್‌ನ ದೊರೆ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಸಂಭಾಷಣೆ ನಡೆಸಿದರು. ಈ ಮಾತುಕತೆಗಳ ಸಂದರ್ಭದಲ್ಲಿ, ಸೌದಿ ಅರೇಬಿಯಾ ಮತ್ತು ಬಹ್ರೇನ್ ಎರಡರ ಮೇಲೂ ಇತ್ತೀಚೆಗೆ ನಡೆದ ದಾಳಿಗಳನ್ನು ಪ್ರಧಾನಿ ಬಲವಾಗಿ ಖಂಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !