ಹೊಸದಿಗಂತ ವರದಿ,ಬಂಟ್ವಾಳ:
ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಮೂಲ ಕಾರಣವನ್ನು ಪತ್ತೆಹಚ್ಚುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷರು,ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ಸೂಚಿಸಿದ್ದಾರೆ.
ಈ ಸಂಬಂಧ ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಸ್ಪೀಕರ್ ಯು.ಟಿ.ಖಾದರ್ ಅವರು ಸಮಗ್ರ ತನಿಖೆ ನಡೆಸಿ,ಇದರ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಅಂಚೆ ಇಲಾಖೆಯ ಅಧಿಕಾರಿಗಳು ಕೂಡ ಈ ಅನಿರೀಕ್ಷಿತ ವಿದ್ಯಮಾನದ ಬಗ್ಗೆ ಯು ಗಮನ ಹರಿಸಿದ್ದು, ಅಂಚೆ ಇಲಾಖೆಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಸತ್ಯಾಸತ್ಯತೆ ಅಧಿಕಾರಿಗಳ ತನಿಖೆಯ ನಂತರವೇ ಹೊರಬರಬೇಕಾಗಿದೆ.ನೇತ್ರಾವತಿ ನದಿ ಕಿನಾರೆಯಲ್ಲಿ ಅಧಾರ್ ಕಾಡ್ ೯ ಪತ್ತೆಯಾಗಿರುವ ಪ್ರಕರಣ ಸ್ಥಳೀಯರಲ್ಲಿ ಹತ್ತು ಹಲವು ಅನುಮಾನಗಳ ಜೊತೆಗೆ ಕುತೂಹಲವನ್ನುಂಟು ಮಾಡಿದೆ.
ಪುದು ಗ್ರಾಮದ ಬಳಿ ನದಿ ತಟದಲ್ಲಿ ಕಾರ್ಡ್‌ಗಳು ಬಿದ್ದಿರುವುದನ್ನು ಕೆಲ ಸ್ಥಳೀಯರು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರ ಸಹಕಾರದಿಂದ ನದಿ ತೀರದಲ್ಲಿ ಕಂಡುಬಂದ ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿಟ್ಟು. ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರಿಗೆ ಮಾಹಿತಿ ನೀಡಲಾಗಿತ್ತು. ತಿಳಿಸಲಾಗಿದೆ.



