ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಇಂಡಿಯನ್ ಏರ್ಫೋರ್ಸ್ನ ಸುಖೋಯ್-30MKI ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
ತರಬೇತಿಯಲ್ಲಿದ್ದ Su-30MKI ಯುದ್ಧ ವಿಮಾನ ಗುರುವಾರ ಜೋರ್ಹತ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.
ಈ ದುರ್ಘಟನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮಾರಣಾಂತಿಕವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಾಯುಪಡೆ ಶುಕ್ರವಾರ ಅಧಿಕೃತವಾಗಿ ತಿಳಿಸಿದೆ.
ಈ ಬಗ್ಗೆ ಭಾರತೀಯ ವಾಯುಪಡೆ ಪ್ರತಿಕ್ರಿಯಿಸಿ, ಈ ದುಃಖದ ಸಮಯದಲ್ಲಿ IAFನ ಎಲ್ಲಾ ಸಿಬ್ಬಂದಿಗಳು ಮೃತ ಪೈಲಟ್‌ಗಳ ಕುಟುಂಬಗಳಿಗೆ ಪ್ರಾಮಾಣಿಕ ಸಂತಾಪ ಸೂಚಿಸುತ್ತಾರೆ. ದುಃಖಿತ ಕುಟುಂಬಗಳೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಜೋರ್ಹತ್ ವಾಯುನೆಲೆಯಿಂದ ಹಾರಿದ ಈ ಯುದ್ಧ ವಿಮಾನವು ಸಂಜೆ ವೇಳೆಗೆ ರಾಡಾರ್ ಸಂಪರ್ಕ ಕಳೆದುಕೊಂಡಿತ್ತು. ರಷ್ಯಾ ಮೂಲದ ಸು-30MKI ಯುದ್ಧ ವಿಮಾನದೊಂದಿಗೆ ಕೊನೆಯ ಸಂಪರ್ಕ ಸಂಜೆ 7:42 ಗಂಟೆಗೆ ನಡೆದಿತ್ತು ಎಂದು ವರದಿಯಾಗಿದೆ. ಈ ನಂತರ ವಿಮಾನದ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ತುರ್ತು ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎನ್ನಲಾಗಿದೆ.



