March 7, 2026
Saturday, March 7, 2026
spot_img

ರಾಜ್ಯ ಬಜೆಟ್ | ಮಾತು ತಪ್ಪಿದ ಸಿಎಂ ಸಿದ್ದರಾಮಯ್ಯ: ಕಾರಂಜಾ ಸಂತ್ರಸ್ತರ ಆಕ್ರೋಶ

ಹೊಸದಿಗಂತ ವರದಿ ​ಬೀದರ್:

ಬೀದರ್ ಜಿಲ್ಲೆಯ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಮತ್ತೆ ಅನ್ಯಾಯ ಆಗಿದೆ. ಬಜೆಟ್ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಇವರಿಬ್ಬರ ನೇತೃತ್ವದಲ್ಲಿ ಸಂತ್ರಸ್ತರೊಡನೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾಗ ಬರುವ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವ ಕುರಿತು ಭರವಸೆ ನೀಡಿದ್ದರು ಆದರೆ ಶುಕ್ರವಾರ ದಾಖಲೆಯ 17ನೇಯ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಕಾರಂಜಾ ರೈತರಿಗೆ ಮತ್ತೇ ನುಡಿದಂತೆ ನಡೆಯದ ಕಾರಣ ಕಾರಂಜಾ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೊಸದಿಗಂತಕ್ಕೆ ಮಾತನಾಡಿದ ರೈತ ಮುಖಂಡ ಚಂದ್ರಶೇಖರ್ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಇವರಿಬ್ಬರನ್ನು ನಂಬಿ ನಾವುಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಮನವಿ ಮಾಡಿದ್ದೇವು ಆದರೆ ಈ ಸಾಲಿನ ಬಜೆಟ್ನಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ನಮ್ಮ ಕೈಗೆ ಖಾಲಿ ಚೊಂಬು ನೀಡಿದ್ದಾರೆ, ದಿವಂಗತ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ಕೊನೆಯುಸಿರು ಇರುವ ತನಕ ಕಾರಂಜಾ ಸಂತ್ರಸ್ತರ ನೋವನ್ನು ಅತಿ ಸಮೀಪದಿಂದ ಕಂಡಿದ್ದ ಅವರು ನಮಗೆ ಪರಿಹಾರ ಸಿಗಲು ನಿರಂತರ ಹೋರಾಟ ನಡೆಸಿದ್ದರು ಆದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಂದೆಯ ಆಶಯವನ್ನು ಪೂರೈಸಲು ಸಂಪೂರ್ಣ ವಿಫಲರಾಗಿದ್ದಾರೆ, ಇದು ಕಾರಂಜಾ ಸಂತ್ರಸ್ತರ ಜೊತೆಗೆ ಜಿಲ್ಲೆಯ ಧೀಮಂತ ನಾಯಕನಿಗೆ ಸಿಎಂ ಸಿದ್ದರಾಮಯ್ಯ ಮಾಡಿದ ಘೋರ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರ ಖಂಡ್ರೆ ಸಚಿವರಾಗಿಯೂ ಯಾವುದೇ ಪ್ರಯೋಜನ ಜಿಲ್ಲೆಗೆ ಆಗಿಲ್ಲ ಅವರಿಂದ ಕಾರಂಜಾ ಸಂತ್ರಸ್ತರಿಗೆ ಪರಿಹಾರ ದೊರಕಿಸುವ ಭರವಸೆ ನಾವು ಕಳೆದುಕೊಂಡಿದ್ದೇವೆ, ರಾಜ್ಯ ಸರ್ಕಾರ ಕಾರಂಜಾ ಸಂತ್ರಸ್ತರ ಬಗ್ಗೆ ಮಾಡಿದ ನಿಷ್ಕಾಳಜಿಯ ಪರಿಣಾಮ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗುತ್ತೆ, 28 ಗ್ರಾಮಗಳ ಕಾರಂಜಾ ಯೋಜನೆ ಸಂತ್ರಸ್ತರೆಲ್ಲರೂ ಸೇರಿಕೊಂಡು ಮತ್ತೊಮ್ಮೆ ಹೋರಾಟಕ್ಕೆ ಇಳಿಯುತ್ತೇವೆ ಸಿಎಂ ಸಿದ್ದರಾಮಯ್ಯ ಆಗಲಿ ರಾಜ್ಯ ಸರ್ಕಾರದ ಯಾವುದೇ ಸಚಿವರು ಜಿಲ್ಲೆಯಲ್ಲಿ ಬಂದಾಗ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:

ರೈತ ಮುಖಂಡ ಸೋಮನಾಥ್ ಪಾಟೀಲ್ ಬಜೆಟ್ ಕುರಿತು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ಅನುದಾನದ ಲೆಕ್ಕದಲ್ಲಿ ಬೀದರ್ ಜಿಲ್ಲೆಗೆ ಕಡೆಯ ಸ್ಥಾನವೇ ಗತಿ ಇದು ದಶಕಗಳಿಂದ ರಾಜ್ಯ ಸರ್ಕಾರಗಳು ನಡೆದುಕೊಂಡು ಬಂದ ಹಾದಿ, ಇದರಲ್ಲೇನು ಆಶ್ಚರ್ಯವಿಲ್ಲ, ರಾಜ್ಯದಲ್ಲೇ ಅತಿ ಕಡಿಮೆ ಬೆಲೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಗುತ್ತಿದೆ, ರಾಜ್ಯ ಬಜೆಟ್ ನಲ್ಲಿ ಸರಿಪಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದು ಹಸಿ ಸುಳ್ಳು ಮತ್ತೋಮ್ಮೆ ಬಹಿರಂಗವಾಗಿದೆ, ಸಿಎಂ ಸಿದ್ದರಾಮಯ್ಯ ಜಿಲ್ಲೆಯ ರೈತರ ಆಶಯದ ಮೇಲೆ ತಣ್ಣೀರು ಎರಚಿದ್ದಾರೆ ಎಂದು ಹೇಳಿದರು.

ರೈತ ಮುಖಂಡ ವಿ.ಕೆ.ದೇಶಪಾಂಡೆ ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದಾಗಿ ಹೇಳಿದ್ದರು, 2023ರಿಂದ ಇಲ್ಲಿಯವರೆಗೆ 3 ಬಜೆಟ್ ಮಂಡನೆ ಆಗಿವೆ ಒಂದೇ ಒಂದು ಬಾರಿಯೂ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ವಿಶೇಷ ಪ್ಯಾಕೇಜ್ ಕುರಿತು ಎಲ್ಲಿಯೂ ಕೂಡ ಉಲ್ಲೇಖ ಮಾಡಲಾಗಿಲ್ಲ, ಅವರೊಬ್ಬ ಸ್ವತಃ ನುಡಿದಂತೆ ನಡೆಯದ ಸುಳ್ಳು ಸಿಎಂ ಸಿದ್ದರಾಮಯ್ಯ ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಬೀದರ್ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಮತ್ತೋಮ್ಮೆ ಹುಸಿಯಾಗಿದೆ. ಈ ಸರ್ಕಾರದ ಪರಿಸ್ಥಿತಿ ಅಂಧೇರಿ ನಗರಿ ಚೌಪಟ್ ರಾಜಾ, ಟಕೆ ಸೇರ್ ಭಾಜಿ ಟಕೆ ಸೇರ್ ಖಾಜಾ ಎನ್ನುವಂತಾಗಿದೆ, ಸುಳ್ಳಿನ ಸರದಾರನ ಬೋಗಳೆ ಭಾಷಣದ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !