October 11, 2026
Sunday, October 11, 2026
spot_img

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿ: ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ “ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ” ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ತ್ವರಿತ ಸಿದ್ಧತೆ ನಡೆಸುತ್ತಿದ್ದು, ನೂತನ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ‘ಉಚಿತ ಆನ್ ಲೈನ್ ತರಬೇತಿ’ ಅನುಷ್ಠಾನ ಕುರಿತು ಮಹತ್ವದ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ‘ಉಚಿತ ಆನ್ ಲೈನ್ ತರಬೇತಿ’ ಯೋಜನೆ ಘೋಷಿಸಿದ್ದು, ನಾಲ್ಕೇ ದಿನದಲ್ಲಿ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತ್ವರಿತ ಪ್ರಯತ್ನ ನಡೆಸಿದ್ದಾರೆ.

ಈ ಉಚಿತ ಆನ್ ಲೈನ್ ತರಬೇತಿ ಅನುಷ್ಠಾನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮತ್ತವರ ಕುಟುಂಬಕ್ಕೆ ಆರ್ಥಿಕ ಹೊರೆ ತಪ್ಪುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಉಚಿತ ಆನ್‌ಲೈನ್ ತರಬೇತಿಯಿಂದ ಹೆಚ್ಚಿನ ಅನುಕೂಲವಾಗುತ್ತದೆ. ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ. ಉನ್ನತ ಶಿಕ್ಷಣ ಮತ್ತು ಆಡಳಿತಾತ್ಮಕವಾಗಿಯೂ ಇದು ಅತ್ಯುತ್ತಮ ಹೆಜ್ಜೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಅಭಿಪ್ರಾಯ ಹಂಚಿಕೊಂಡು ಸಮಗ್ರ ಚರ್ಚೆ, ಪರಿಶೀಲನೆ ನಡೆಸಿದ ಸಚಿವರು, ಈ ಉಚಿತ ಆನ್ ಲೈನ್ ತರಬೇತಿಯಿಂದ “ದೇಶಾದ್ಯಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಲಿಕಾ ವಿಷಯ, ತಜ್ಞರ ಮಾರ್ಗದರ್ಶನ ಮತ್ತು ರಚನಾತ್ಮಕ ಸಿದ್ಧತೆ ಸಾಧ್ಯವಾಗುತ್ತದೆ ಎಂದರು.

Must Read