ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋನ್ ಕರೆ ಹಾಗೂ ಸಂದೇಶಗಳ ಮೂಲಕ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) 351(2) ಮತ್ತು 352 ಸೆಕ್ಷನ್ ಅಡಿಯಲ್ಲಿ ರಜತ್ ಕಿಶನ್ ಹಾಗೂ ಕಿರಣ್ ವಿರುದ್ಧ ಆರೋಪ ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ ರಜತ್ ಕಿಶನ್ ಎ1 ಆರೋಪಿಯಾಗಿ, ಕಿರಣ್ ಎ2 ಆರೋಪಿಯಾಗಿ ಗುರುತಿಸಲಾಗಿದೆ.
ಇದನ್ನೂ ಓದಿ:
ದೂರುದಾರರ ಹೇಳಿಕೆಯಂತೆ, ಫೋನ್ ಕರೆಗಳ ಮೂಲಕ ಬೆದರಿಕೆ ಹಾಕಿ ಕೆಲವು ವ್ಯಕ್ತಿಗಳ ಜೊತೆಗಿನ ಸ್ನೇಹವನ್ನು ಬಿಡುವಂತೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ದೂರುದಾರರ ಕಾರಿನ ಫೋಟೋ ಕಳುಹಿಸಿ “ಇದು ರಜತ್ ಬುಜ್ಜಿ… ಕಾಲ್ ಮಾಡ್ತಾ ಇದ್ದೀನಿ, ವಾಪಸ್ ಕಾಲ್ ಮಾಡ್ತೀರಾ ಅಥವಾ ಇಲ್ವಾ ನಾವೇ ಒಳಗೆ ಹಾಕಿಸಬೇಕಾ?” ಎಂದು ಸಂದೇಶದ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಕಾನ್ಫರೆನ್ಸ್ ಕಾಲ್ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಆದರೆ ಕರೆ ಮಾಡಿದವರು ನಿಜವಾಗಿಯೂ ರಜತ್ ಕಿಶನ್ ಅಥವಾ ಮತ್ತೊಬ್ಬ ವ್ಯಕ್ತಿಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣ ಸಂಬಂಧ ರಜತ್ ಕಿಶನ್ ಮತ್ತು ಕಿರಣ್ ಅವರಿಗೆ ನೋಟಿಸ್ ನೀಡಲು ಕೆ.ಆರ್.ಪುರಂ ಪೊಲೀಸರು ಮುಂದಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



