August 29, 2026
Saturday, August 29, 2026
spot_img

ರೇಟ್ ಕಡಿಮೆಮಾಡ್ಕೊಂಡ ಕೆಂಪು ಸುಂದರಿ: ಟೊಮೇಟೊ ಬೆಳೆದ ರೈತರ ಗೋಳು ಕೇಳೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೊಮೇಟೊ ಬೆಲೆಯಲ್ಲಿ ಉಂಟಾದ ತೀವ್ರ ಕುಸಿತದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನೆ ಹೆಚ್ಚಾದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ಇತರೆ ರಾಜ್ಯಗಳಿಗೆ ಸಾಗಣೆ ಕಡಿಮೆಯಾಗಿರುವುದು ರೈತರ ಆದಾಯದ ಮೇಲೆ ಪರಿಣಾಮ ಬೀರಿದೆ.

ಮಹಾರಾಷ್ಟ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಿಗೆ ಕೋಲಾರದಿಂದ ಸಾಗುತ್ತಿದ್ದ ಟೊಮೇಟೊ ಪೂರೈಕೆ ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಗ್ರಹ ಉಂಟಾಗಿ ಬೆಲೆ ಪಾತಾಳಕ್ಕೆ ಕುಸಿದಿದೆ.

15 ಕೆ.ಜಿ ಟೊಮೇಟೊ ಬಾಕ್ಸ್ ಕೇವಲ 110ಕ್ಕೆ ಮಾರಾಟವಾಗುತ್ತಿದೆ. ಕಳೆದ ತಿಂಗಳು ಇದೇ ಬಾಕ್ಸ್ 300ರಿಂದ 400ರವರೆಗೆ ಇದ್ದ ದರ ಈಗ 50ರಿಂದ 130ರ ನಡುವೆ ಇಳಿಕೆಯಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲೂ 13 ಕೆ.ಜಿ ಬಾಕ್ಸ್ ಬೆಲೆ 300-350ರಿಂದ 80-120ಕ್ಕೆ ಕುಸಿದಿದೆ.

ಇದನ್ನೂ ಓದಿ:

ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚು ವೆಚ್ಚ ಮಾಡಿದ ರೈತರಿಗೆ ಈ ಬೆಲೆ ಇಳಿಕೆ ದೊಡ್ಡ ಹೊಡೆತವಾಗಿದೆ. ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು 5 ಕೆ.ಜಿ ಟೊಮೇಟೊವನ್ನು ಸುಮಾರು 100ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಗ್ರಾಹಕರಿಗೆ ಈ ದರ ಇಳಿಕೆ ಲಾಭಕರವಾದರೂ, ರೈತರಿಗೆ ಇದು ಭಾರೀ ನಷ್ಟ ಉಂಟುಮಾಡಿದ್ದು ಟೊಮೇಟೊಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರವನ್ನು ರೈತರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !