ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ ಕಾತರದ ಕ್ಷಣ ಹತ್ತಿರ ಬಂದಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ನ ಮಹಾ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ವಿಶ್ವದ ದಿಗ್ಗಜ ಕ್ರಿಕೆಟಿಗರು ತಮ್ಮ ಫೇವರೇಟ್ ತಂಡ ಯಾವುದೆಂದು ಘೋಷಿಸುತ್ತಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭಾರತದ ಪರ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಿವಿಲಿಯರ್ಸ್, “ಪ್ರಸ್ತುತ ಫಾರ್ಮ್ ಮತ್ತು ತವರಿನ ಪ್ರೇಕ್ಷಕರ ಬೆಂಬಲವನ್ನು ನೋಡಿದರೆ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗುವುದು ಬಹುತೇಕ ಖಚಿತ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಲಿಷ್ಠ ಭಾರತವನ್ನು ಅವರದ್ದೇ ನೆಲದಲ್ಲಿ ಸೋಲಿಸುವುದು ನ್ಯೂಜಿಲೆಂಡ್ಗೆ ಅಸಾಧ್ಯದ ಮಾತು. ಕಿವೀಸ್ ತಂಡ ಗೆಲ್ಲುವ ಸಾಧ್ಯತೆ ಕೇವಲ 10% ರಿಂದ 20% ರಷ್ಟು ಮಾತ್ರ ಇದೆ. ಅವರು ಗೆಲ್ಲಬೇಕಾದರೆ ತಮ್ಮ ಇತಿಹಾಸದಲ್ಲೇ ಅತ್ಯುತ್ತಮ ಎನ್ನಬಹುದಾದ ಆಟವನ್ನು ಆಡಲೇಬೇಕಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಎಬಿಡಿ, “ಭಾರತದ ಪಾಲಿಗೆ ಬುಮ್ರಾ ಅತಿದೊಡ್ಡ ಶಕ್ತಿ. ಒತ್ತಡದ ಸಮಯದಲ್ಲಿ ಪಂದ್ಯವನ್ನು ಹೇಗೆ ನಿಯಂತ್ರಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅವರ ನಿಖರವಾದ ಯಾರ್ಕರ್ಗಳು ಮತ್ತು ಆತ್ಮವಿಶ್ವಾಸ ಭಾರತಕ್ಕೆ ಪ್ಲಸ್ ಪಾಯಿಂಟ್. ತಂಡಕ್ಕೆ ವಿಕೆಟ್ ಅಗತ್ಯವಿರುವಾಗ ಬುಮ್ರಾ ತಮ್ಮ ಕೌಶಲ್ಯದಿಂದ ಮ್ಯಾಜಿಕ್ ಮಾಡಬಲ್ಲರು,” ಎಂದು ಹೊಗಳಿದ್ದಾರೆ.
ನ್ಯೂಜಿಲೆಂಡ್ ತಂಡವು ಸನ್ನಿವೇಶಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುವಲ್ಲಿ ಜಾಣತನ ತೋರುತ್ತದೆ ಎಂಬುದನ್ನು ಒಪ್ಪಿಕೊಂಡ ಡಿವಿಲಿಯರ್ಸ್, ಅಂತಿಮವಾಗಿ ಭಾರತದ ಬಲದ ಮುಂದೆ ನ್ಯೂಜಿಲೆಂಡ್ ಮಂಕಾಗಲಿದೆ ಎಂದಿದ್ದಾರೆ. “ನನ್ನ ಮನಸ್ಸು ಮತ್ತು ಹೃದಯ ಎರಡೂ ಭಾರತವೇ ಗೆಲ್ಲುತ್ತದೆ ಎಂದು ಹೇಳುತ್ತಿದೆ. ನ್ಯೂಜಿಲೆಂಡ್ ಗೆಲ್ಲಬೇಕಾದರೆ ಅಲ್ಲಿ ಯಾವುದಾದರೂ ಪವಾಡ ನಡೆಯಲೇಬೇಕು,” ಎನ್ನುವ ಮೂಲಕ ಭಾರತವೇ ಈ ಬಾರಿಯ ‘ವಿಶ್ವ ಚಾಂಪಿಯನ್’ ಎಂದು ಭವಿಷ್ಯ ನುಡಿದಿದ್ದಾರೆ.



