ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಸೇನಾ ಒತ್ತಡ ಕಡಿಮೆ ಮಾಡಿ, ಇರಾನ್ ಬಂದರುಗಳ ಮೇಲಿನ ನೌಕಾ ತಡೆ ತೆರವುಗೊಳಿಸಿದರೆ ಏಳು ದಿನಗಳೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಿದ್ಧ ಎಂಬ ವರದಿಗಳನ್ನು ಇರಾನ್ ತಳ್ಳಿಹಾಕಿದೆ.
ರಾಯಿಟರ್ಸ್ ಹಾಗೂ ಜಪಾನ್ನ ಕ್ಯೋಡೊ ನ್ಯೂಸ್ ವರದಿಗಳು ಆಧಾರರಹಿತ ಮತ್ತು ತಪ್ಪು ಮಾಹಿತಿಯನ್ನು ಒಳಗೊಂಡಿವೆ ಎಂದು ಇರಾನ್ನ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದಕ್ಕೂ ಮುನ್ನ ರಾಯಿಟರ್ಸ್ ವರದಿಯಲ್ಲಿ, ಹಿರಿಯ ಇರಾನ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಅಮೆರಿಕ ಸೇನಾ ಒತ್ತಡವನ್ನು ಕಡಿಮೆ ಮಾಡಿ ಬಂದರುಗಳ ಮೇಲಿನ ತಡೆ ತೆರವುಗೊಳಿಸಿದರೆ ಒಂದು ವಾರದೊಳಗೆ ಹಾರ್ಮುಜ್ ಜಲಸಂಧಿ ತೆರೆಯಲು ಟೆಹ್ರಾನ್ ಸಿದ್ಧವಿದೆ ಎಂದು ತಿಳಿಸಲಾಗಿತ್ತು. ಅಮೆರಿಕ ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡುವ ಉದ್ದೇಶವನ್ನು ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ಮಾತುಕತೆಗೆ ಕಾಲಮಿತಿ ನಿಗದಿಪಡಿಸಬೇಕು ಎಂಬುದು ಇರಾನ್ನ ಬೇಡಿಕೆ ಎಂದು ವರದಿ ಹೇಳಿತ್ತು.
ಇದನ್ನೂ ಓದಿ:
ಇರಾನ್ನ ವಿಶ್ವಸಂಸ್ಥೆ ಮಹಾಸಭೆ ನಿಯೋಗಕ್ಕೆ ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸುವ ಅಧಿಕಾರ ನೀಡಲಾಗಿದೆ ಎಂಬ ಮಾಹಿತಿಯೂ ವರದಿಯಾಗಿತ್ತು. ಸೆಪ್ಟೆಂಬರ್ 16ರಂದು ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ಸಂಧಾನದ ಪ್ರಸ್ತಾವ ಕಳುಹಿಸಲಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಇರಾನ್ ಮೂಲಗಳೇ ಈ ವರದಿಯನ್ನು ನಿರಾಕರಿಸಿರುವುದರಿಂದ ಹಾರ್ಮುಜ್ ವಿಚಾರದಲ್ಲಿ ಟೆಹ್ರಾನ್ ನ ನಿಖರ ನಿಲುವಿನ ಬಗ್ಗೆ ಮತ್ತೆ ಗೊಂದಲ ಉಂಟಾಗಿದೆ.
ಹೀಗಾಗಿ, ಹಾರ್ಮುಜ್ ಜಲಸಂಧಿ ತೆರೆಯುವ ಕುರಿತು ಬಂದಿರುವ ಪರಸ್ಪರ ವಿರುದ್ಧ ಹೇಳಿಕೆಗಳ ನಡುವೆ ರಾಜತಾಂತ್ರಿಕ ಮಾತುಕತೆಗೆ ಅವಕಾಶವಿದೆಯೇ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ. ಮುಂದಿನ ಬೆಳವಣಿಗೆಗಳು ತೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ನಿಲುವು ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿವೆ.



