September 23, 2026
Wednesday, September 23, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ | ತುಪ್ಪದ ದಿವ್ಯ ಗುಣಗಳನ್ನು ಯಂತ್ರಗಳಿಂದ ಅಳೆಯಲಾಗದು: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಪ್ಪವನ್ನು ಕೇವಲ ಭೌತಿಕ ಗುಣಗಳ ಆಧಾರದ ಮೇಲೆ ಯಂತ್ರಗಳಿಂದ ವಿಶ್ಲೇಷಿಸಿದರೆ ಅದರ ಸಂಪೂರ್ಣ ಶಕ್ತಿಯನ್ನು ಅರಿಯಲು ಸಾಧ್ಯವಿಲ್ಲ. ತುಪ್ಪದಲ್ಲಿ ಕಣ್ಣಿಗೆ ಕಾಣದ ಹಾಗೂ ಅನುಭವದ ಮೂಲಕ ಅರಿಯಬಹುದಾದ ದೈವಿಕ ಗುಣಗಳಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮಂಗಳವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ನೈಜ ದೇಶಿ ಗೋವಿನ ತುಪ್ಪವು ಸ್ಮೃತಿ ಮತ್ತು ಬುದ್ಧಿಯನ್ನು ಉದ್ದೀಪನಗೊಳಿಸುವುದರ ಜತೆಗೆ ದೇಹದ ಓಜಸ್ಸನ್ನು ಹೆಚ್ಚಿಸುವ ಗುಣ ಹೊಂದಿದೆ ಎಂದು ಹೇಳಿದರು. ದೇಹಕ್ಕೆ ಬಲ ಮತ್ತು ಮೃದುತ್ವ ಎರಡನ್ನೂ ನೀಡುವ ವಿಶೇಷ ಗುಣ ತುಪ್ಪಕ್ಕಿದೆ ಎಂದರು.

ಇಂದಿನ ದಿನಗಳಲ್ಲಿ ದೇಹದ ನಿರ್ವಿಶೀಕರಣ ಅಥವಾ ದೇಹ ಶುದ್ಧೀಕರಣ (detoxification)ಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ತುಪ್ಪವು ಈ ದೃಷ್ಟಿಯಿಂದಲೂ ಪ್ರಮುಖವಾಗಿದೆ ಎಂದು ಶ್ರೀಗಳು ತಿಳಿಸಿದರು. ಆಯುರ್ವೇದದಲ್ಲಿ ವಾತ, ಪಿತ್ತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಲ್ಲಿ ತುಪ್ಪದ ಬಳಕೆಯನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು. ಸಾಮಾನ್ಯವಾಗಿ ಬಲ ಇರುವವರು ಒರಟಾಗಿರುತ್ತಾರೆ. ಕೋಮಲವಾಗಿರುವವರು ಬಲಹೀನರಾಗಿರುತ್ತಾರೆ. ಆದರೆ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಬಲದ ಜೊತೆಗೆ ಮೃದುತ್ವವೂ ಬರುತ್ತದೆ. ಇದು ತುಪ್ಪದ ವೈಶಿಷ್ಟ್ಯವಾಗಿದ್ದು, ತುಪ್ಪ ಹೊಸದಾದರೂ, ಹಳೆಯದಾದರೂ ಎರಡೂ ಕೂಡ ದೇಹಕ್ಕೆ ಹಿತ ಎಂದು ಆಯುರ್ವೇದ ಗ್ರಂಥಗಳನ್ನು ಆಧಾರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ದೇಶಿ ಗೋವಿನ ತುಪ್ಪಕ್ಕೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದ ಅವರು, ವಿವಿಧ ಪ್ರಾಣಿಗಳ ಹಾಲಿನಿಂದ ತಯಾರಿಸುವ ತುಪ್ಪಗಳ ಪೈಕಿ ಗೋವಿನ ತುಪ್ಪವನ್ನು ಆಯುರ್ವೇದದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ ಎಂದರು.

ಇತರರ ಮನೆಯಲ್ಲಿ ಊಟ ಮಾಡುವ ಸಂದರ್ಭ ಎದುರಾದಾಗ ತುಪ್ಪವನ್ನು ಅನ್ನದೊಂದಿಗೆ ಸೇವಿಸುವುದರಿಂದ ಪರಾನ್ನದ ದೋಷ ನಿವಾರಣೆಯಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತನ್ನೂ ಅವರು ಉಲ್ಲೇಖಿಸಿದರು.

ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಕೃಷ್ಣಯಜುರ್ವೇದ ಘನಪಾರಾಯಣದಲ್ಲಿ ಭಾಗವಹಿಸಿದ ಶ್ರೀಗಳು, ಪಾರಾಯಣದಲ್ಲಿ ನಿರತರಾದ ವೇದ ವಿದ್ವಾಂಸರನ್ನು ಆಶೀರ್ವದಿಸಿದರು. ಯಕ್ಷಗಾನ ಕಲಾವಿದ ತೋಟಿಮನೆ ಗಣಪತಿ ಹೆಗಡೆ, ದಿನಪ್ರಧಾನರಾಗಿ ಮಂಜುನಾಥ ಹೆಗಡೆ ಮಗೇಗಾರು ದಂಪತಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !